ಗೋವುಗಳ ಕಳ್ಳತನ ಪ್ರಕರಣ ಮರುಕಳಿಸಕೂಡದು: ಸಚಿವ ಪ್ರಭು ಬಿ. ಚವ್ಹಾಣ್

ದಿಗಂತ ವರದಿ ಮಂಗಳೂರು:

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಲವು ವರ್ಷಗಳಿಂದ ನಿರಂತರವಾಗಿ ಗೋವುಗಳ ಕಳವು ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅದು ಮರುಕಳಿಸಕೂಡದು.ಆ ದಿಸೆಯಲ್ಲಿ ಕೂಡಲೇ ಕ್ರಮಕೈಗೊಳ್ಳಿ ಎಂದು ಪಶು ಸಂಗೋಪನೆ ಸಚಿವ ಪ್ರಭು ಬಿ.ಚವ್ಹಾಣ್ ಅವರು ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಖಡಕ್ ಎಚ್ಚರಿಕೆ ನೀಡಿದ್ದಾರೆ. ಗೋ ರಕ್ಷಣಾ ಸಮಿತಿ ರಚಿಸುವಂತೆಯೂ ಸಚಿವರು ಸೂಚನೆ ನೀಡಿದ್ದಾರೆ.

ಕರಾವಳಿ ಭಾಗದಲ್ಲಿ ನಿರಂತರವಾಗಿ ಗೋವುಗಳು ಕಳವು ಆಗುತ್ತಿರುವ ಕುರಿತು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ವರದಿಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಈ ಬಗ್ಗೆ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಗೋ ರಕ್ಷಣಾ ಸಮಿತಿ ರಚಿಸಿ, ಗೋವುಗಳನ್ನು ಅಕ್ರಮವಾಗಿ ಸಾಗಿಸುವ ವಾಹನಗಳ ಮೇಲೆ ಹದ್ದಿನ ಕಣ್ಣಿಡಬೇಕು. ಚಲನ-ವಲನ ಆಧರಿಸಿ ಕರಾವಳಿ ಭಾಗದಲ್ಲಿ ರಾತ್ರಿ ಮತ್ತು ಹಗಲು ಪಾಳಿಗಳಲ್ಲಿ ಪೊಲೀಸರ ಗಸ್ತು ಹೆಚ್ಚಿಸಬೇಕು. ಚೆಕ್ ಪೋಸ್ಟ್ ಗಳು, ನಾಕಾ ಬಂಧಿಗಳನ್ನು ಬಲಗೊಳಿಸಬೇಕು. ಗೋಪಾಲಕರಲ್ಲಿ ಇರುವ ಭಯದ ವಾತಾವರಣವನ್ನು ನಿರ್ಮೂಲನೆ ಮಾಡಬೇಕು. ಸರಕಾರ ನಿಮ್ಮೊಂದಿಗೆ ಸದಾ ಇರಲಿದೆ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.

ಕರಾವಳಿಯಲ್ಲಿ ಗೋವುಗಳನ್ನು ಮಾರಾಟ ಮಾಡುವ ಮಾಲೀಕರು ಹಾಗೂ ಕೊಳ್ಳುವವರ ನಡುವೆ ಇ-ಛಾಪಾ ಕಾಗದದಲ್ಲಿ ಮುಚ್ಚಳಿಕೆ ಪ್ರಕ್ರಿಯೆ ಮಾಡಿಸಿಕೊಂಡು, ಮುಚ್ಚಳಿಕೆ ಪ್ರಮಾಣ ಪತ್ರದಲ್ಲಿ ಸಮಯ, ಅದಕ್ಕೆ ಸಂಬಂಧಿಸಿದಂತೆ ಮೊಬೈಲುಗಳಲ್ಲಿ ಇರುವ ಡೇಟ್ ಕ್ಯಾಮೆರಾ ಆ್ಯಪ್ ಗಳಲ್ಲಿ ಸಮಯ ಸಮೇತ ಭಾವಚಿತ್ರವನ್ನು ಸೆರೆ ಹಿಡಿದುಕೊಂಡು ಗೋವುಗಳನ್ನು ಸಾಗಿಸುವ ವಾಹನಗಳು ಪೊಲೀಸರ ತಪಾಸಣೆ ಸಮಯದಲ್ಲಿ ಹಾಜರುಪಡಿಸಬೇಕು ಎಂದು ಸಚಿವರು ಪತ್ರದಲ್ಲಿ ವಿವರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!