ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬೆಳಗ್ಗೆ 11 ಗಂಟೆಗೆ ಹೈದರಾಬಾದ್‌ನಲ್ಲಿರುವ ಎಂಎಲ್‌ಸಿ ಕವಿತಾ ನಿವಾಸದಲ್ಲಿ ಸಿಬಿಐ ವಿಚಾರಣೆ ನಡೆಸಲಿದೆ. ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಸಿಬಿಐ ಈಗಾಗಲೇ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕವಿತಾ ಅವರು ಶನಿವಾರ ಪ್ರಗತಿ ಭವನಕ್ಕೆ ತೆರಳಿ ಸಿಎಂ ಕೆಸಿಆರ್ ಅವರನ್ನು ಭೇಟಿ ಮಾಡಿ ಸಿಬಿಐ ತನಿಖೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ದೆಹಲಿ ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 6 ರಂದು ಕವಿತಾ ಹೇಳಿಕೆಯನ್ನು ಸಿಬಿಐ ಅಧಿಕಾರಿಗಳು ತೆಗೆದುಕೊಳ್ಳಬೇಕಾಗಿತ್ತು. ಆದರೆ, 6ರಂದು ಪೂರ್ವ ನಿಯೋಜಿತ ವೇಳಾಪಟ್ಟಿಯಿಂದಾಗಿ ಸಿಬಿಐ ತನಿಖೆಗೆ ಹಾಜರಾಗಲು ಸಾಧ್ಯವಿಲ್ಲ, ಈ ತಿಂಗಳ 11, 12, 14 ಮತ್ತು 15 ರಂದು ಯಾವುದೇ ಸಮಯದಲ್ಲಿ ಸಿಬಿಐ ಅಧಿಕಾರಿಗಳು ಹೇಳಿಕೆ ತೆಗೆದುಕೊಳ್ಳಬಹುದು ಎಂದು ಕವಿತಾ ಸಿಬಿಐಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಇದೇ 11ರಂದು ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಆಕೆಯ ಹೇಳಿಕೆಯನ್ನು ತೆಗೆದುಕೊಳ್ಳುವುದಾಗಿ ಸಿಬಿಐ ಹೇಳಿತ್ತು ಹಾಗಾಗಿ ದೆಹಲಿ ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಇಂದು ಕವಿತಾ ಅವರ ನಿವಾಸಕ್ಕೆ ತೆರಳಿ ಹೇಳಿಕೆ ಪಡೆಯಲಿದ್ದಾರೆ.
ಈ ವೇಳೆ ಕವಿತಾ ಹೇಳಿಕೆ ಪಡೆಯಲು ಹೈದರಾಬಾದ್‌ನಲ್ಲಿರುವ ತಮ್ಮ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಬರುತ್ತಿರುವ ಸಂದರ್ಭದಲ್ಲಿ ಯಾವುದೇ ಕಾರ್ಯಕರ್ತರು ತಮ್ಮ ಮನೆಗೆ ಬರಬೇಡಿ ಎಂದು ಕವಿತಾ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಕವಿತಾ ಅವರ ಮನೆ ಮಾರ್ಗದಲ್ಲಿ ಪೊಲೀಸರು ಈಗಾಗಲೇ ಭದ್ರತೆ ನಿಯೋಜಿಸಿದ್ದಾರೆ. ಕವಿತಾ ಅವರ ನಿವಾಸದ ಬಳಿ ಬಿಆರ್‌ಎಸ್ ಮುಖಂಡರು ಪ್ಲೆಕ್ಸ್ ಹೋರ್ಡಿಂಗ್ಸ್, ಬ್ಯಾನರ್‌ಗಳನ್ನು ಹಾಕಿದ್ದಾರೆ. ಡಾಟರ್ ಆಫ್ ಫೈಟರ್.. ವಿಲ್ ನೆವರ್ ಫಿಯರ್, ‘ವಿ ಆರ್ ವಿತ್ ಯು ಕವಿತಕ್ಕಾ..’ ಎಂದು ಬರೆದಿದ್ದಾರೆ.