ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದ್ದು, ದಾಳಿ ವೇಳೆ ಚಾಕು, ಕತ್ತರಿ, ಸಿಗರೇಟು ಸೇರಿದಂತೆ ಹಲವು ನಿಷೇಧಿತ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.
ಕಾರಾಗೃಹದಲ್ಲಿರುವ ವಿಚಾರಣಾಧೀನ ಹಾಗೂ ಸಜಾ ಕೈದಿಗಳಿಗೆ ಕದ್ದುಮುಚ್ಚಿ ಮೊಬೈಲ್ ಪೂರೈಸುತ್ತಿದ್ದ ಕಾರಾಗೃಹ ಆಸ್ಪತ್ರೆಯ ಇಬ್ಬರು ಆಪ್ತ ಸಮಾಲೋಚಕರನ್ನು ಕಳೆದ ವಾರ ಬಂಧಿಸಲಾಗಿತ್ತು.
ಹೊರ ಗುತ್ತಿಗೆ ಆಧಾರದಲ್ಲಿ ಆಪ್ತ ಸಮಾಲೋಚಕರಾಗಿ ಕೆಲಸ ಮಾಡುತ್ತಿದ್ದ ನವ್ಯಶ್ರೀ (33) ಮತ್ತು ಸೃಜನ್ (33) ಅವರು, ಕಾವಲು ಸಿಬ್ಬಂದಿಯ ಕಣ್ತಪ್ಪಿಸಿ ಕೈದಿಗಳಿಗೆ ಮೊಬೈಲ್ ಪೂರೈಸುತ್ತಿದ್ದರು.
ನವ್ಯಶ್ರೀ ಅವರು ತಮ್ಮ ಬ್ಯಾಗ್‌ನಲ್ಲಿ ಮೊಬೈಲ್ ಬಚ್ಚಿಟ್ಟುಕೊಂಡು ಜೈಲಿನ ಒಳಕ್ಕೆ ಹೋಗಲು ಯತ್ನಿಸಿದ್ದರು. ಆಗ ಪ್ರವೇಶ ದ್ವಾರದಲ್ಲಿದ್ದ ಸಿಬ್ಬಂದಿ ಬ್ಯಾಗ್ ಪರಿಶೀಲನೆ ನಡೆಸಿದಾಗ ಮೊಬೈಲ್ ಪತ್ತೆ ಆಗಿತ್ತು. ಬಂಧಿತರನ್ನು ವಿಚಾರಣೆ ನಡೆಸಿದಾಗ ಜೈಲಿನ ಒಳಗೆ ಕೆಲವು ಅಕ್ರಮ ಚಟುವಟಿಕೆ ನಡೆಯುತ್ತಿರುವುದು ಬಹಿರಂಗಗೊಂಡಿತ್ತು.