Friday, January 9, 2026

ಸಿಸಿಟಿವಿ ತಂದ ಸಂಕಷ್ಟ: ಪುಂಡಾಟಿಕೆ ತೋರಿಸಲು ಹೋದವರು ಈಗ ಜೈಲು ಪಾಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಗರದ ಜನನಿಬಿಡ ಪ್ರದೇಶದಲ್ಲಿ ಮಚ್ಚು ಹಿಡಿದು ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಇಬ್ಬರು ರೌಡಿ ಶೀಟರ್‌ಗಳನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ರಾಕೇಶ್ ಮತ್ತು ಸಾಹಿಲ್ ಎಂದು ಗುರುತಿಸಲಾಗಿದ್ದು, ಇವರಿಂದ ಭಾರಿ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಮೂರು ದಿನಗಳ ಹಿಂದೆ ದಾವಣಗೆರೆಯ ನಿಟ್ಟುವಳ್ಳಿ ಶ್ರೀರಾಮ ಬಡಾವಣೆಯಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿತ್ತು. ಈ ವೇಳೆ ಅಟೋದಲ್ಲಿ ಬಂದಿದ್ದ ರಾಕೇಶ್ ಮತ್ತು ಸಾಹಿಲ್, ಯುವಕರ ಮೇಲೆ ಹಲ್ಲೆ ನಡೆಸಲು ಲಾಂಗ್ ಹಾಗೂ ಮಚ್ಚುಗಳನ್ನು ಹಿಡಿದು ಓಡಾಡಿದ್ದರು. ಇವರ ಈ ಪುಂಡಾಟದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು.

ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಕೆಟಿಜೆ ನಗರ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಆರೋಪಿಗಳನ್ನು ಬಂಧಿಸಿ, ಅವರು ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಅವರ ರೂಮ್‌ಗೆ ತೆರಳಿದಾಗ ಪೊಲೀಸರಿಗೆ ಶಾಕ್ ಕಾದಿತ್ತು. ಅಲ್ಲಿ ಕೇವಲ ಮಚ್ಚುಗಳಲ್ಲದೆ, ಮಾರಾಟಕ್ಕೆ ಇಟ್ಟಿದ್ದ ಗಾಂಜಾ ಪತ್ತೆಯಾಗಿದೆ.

ಸುಮಾರು 60 ಸಾವಿರ ರೂ. ಮೌಲ್ಯದ 1 ಕೆಜಿಗೂ ಅಧಿಕ ಗಾಂಜಾ. ಕೃತ್ಯಕ್ಕೆ ಬಳಸಿದ್ದ 2 ಮಚ್ಚುಗಳು. ಕೃತ್ಯಕ್ಕೆ ಬಳಸಿದ ಅಟೋ ಹಾಗೂ ಇತರೆ ವಸ್ತುಗಳು ವಶಪಡಿಸಿಕೊಂಡಿದ್ದಾರೆ.

ಸದ್ಯ ಆರೋಪಿಗಳ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇವರು ಕೇವಲ ಗಲಾಟೆ ಮಾಡುವುದಷ್ಟೇ ಅಲ್ಲದೆ, ನಗರದಲ್ಲಿ ಗಾಂಜಾ ಪೆಡ್ಲಿಂಗ್ ದಂಧೆಯಲ್ಲೂ ತೊಡಗಿಸಿಕೊಂಡಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

error: Content is protected !!