ಎ.ಜಿ. ಕೊಡ್ಗಿ ಅವರ ನಿಧನಕ್ಕೆ ನಳಿನ್‍ ಕುಮಾರ್ ಕಟೀಲ್ ತೀವ್ರ ಸಂತಾಪ

ಹೊಸದಿಗಂತ ವರದಿ,ಮಂಗಳೂರು:

ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನ ಹಿರಿಯ ರಾಜಕಾರಣಿ ಎ.ಜಿ. ಕೊಡ್ಗಿ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಎ.ಜಿ. ಕೊಡ್ಗಿ ಅವರು ಕರಾವಳಿಯ ರಾಜಕೀಯ ರಂಗದ ಭೀಷ್ಮನಾಗಿ ಕಾರ್ಯ ನಿರ್ವಹಿಸಿದ್ದರು. ಸಹಕಾರ ರಂಗ, ಕೃಷಿ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದರು ಎಂದು ಅವರು ತಿಳಿಸಿದ್ದಾರೆ. ತಾಲೂಕು ಬೋರ್ಡ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು 8 ವರ್ಷ ತಾಲೂಕು ಬೋರ್ಡ್ ಸದಸ್ಯರಾಗಿದ್ದರು. ಮಂಗಳೂರು ಜಿಲ್ಲಾ ಪರಿಷತ್ ಸದಸ್ಯ, ಆರ್ಥಿಕ ಸಮಿತಿ ಸದಸ್ಯ, 1972-83ರ ತನಕ ಬೈಂದೂರು ಶಾಸಕ, 2006-08ರ ತನಕ ರಾಜ್ಯ ಮೂರನೇ ಹಣಕಾಸು ಆಯೋಗ ಅಧ್ಯಕ್ಷ, ಬಳಿಕ ಅದರ ಕಾರ್ಯಪಡೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಛಾಪನ್ನು ಮೂಡಿಸಿದ್ದ ಅವರು ಕೊಡ್ಗಿ, ಶಂಕರನಾರಾಯಣ ಸಿಎ ಬ್ಯಾಂಕ್ ಅಧ್ಯಕ್ಷ, ಮಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಸ್ಕ್ಯಾಮ್ಸ್ ನಿರ್ದೇಶಕ, ಮಂಗಳೂರು ಎಪಿಎಂಸಿ ಅಧ್ಯಕ್ಷ ಅಲ್ಲದೆ ರಾಜ್ಯ ಮಾರ್ಕೆಟಿಂಗ್ ಬೋರ್ಡ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. 1982-1990ರ ತನಕ ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಅವರ ನಿಧನದಿಂದ ಪಕ್ಷ ಹಾಗೂ ಸಮಾಜ ಒಬ್ಬ ಮಾರ್ಗದರ್ಶಕ ವ್ಯಕ್ತಿಯನ್ನು ಕಳೆದುಕೊಂಡಂತಾಗಿದೆ ಎಂದು ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!