ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀರ್ಘಕಾಲದ ಕಾಯುವಿಕೆಗೆ ತೆರೆಬಿದ್ದಿದೆ! ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ವಿಮಾ ಕಂಪನಿಗಳು ಮತ್ತು ನಬಾರ್ಡ್ ಉದ್ಯೋಗಿಗಳ ವೇತನ ಪರಿಷ್ಕರಣೆಗೆ ಶುಕ್ರವಾರ ಅಧಿಕೃತ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಈ ನಿರ್ಧಾರದಿಂದ ಕೇವಲ ಸೇವೆಯಲ್ಲಿರುವವರಷ್ಟೇ ಅಲ್ಲದೆ, ಸಾವಿರಾರು ಪಿಂಚಣಿದಾರರಿಗೂ ಆರ್ಥಿಕ ಲಾಭವಾಗಲಿದೆ.
ಸಾರ್ವಜನಿಕ ವಲಯದ ವಿಮಾ ಸಂಸ್ಥೆಗಳ ಉದ್ಯೋಗಿಗಳಿಗೆ ಈ ಪರಿಷ್ಕರಣೆ ದೊಡ್ಡ ವರದಾನವಾಗಿದೆ.
ಒಟ್ಟಾರೆ ವೇತನ ವೆಚ್ಚದಲ್ಲಿ ಶೇ. 12.41 ರಷ್ಟು ಹೆಚ್ಚಳವಾಗಲಿದ್ದು, ಮೂಲ ವೇತನ ಮತ್ತು ತುಟ್ಟಿಭತ್ಯೆ (DA) ಮೇಲೆ ಶೇ. 14 ರಷ್ಟು ಹೆಚ್ಚಳ ಸಿಗಲಿದೆ. ಸುಮಾರು 43,247 ಉದ್ಯೋಗಿಗಳಿಗೆ ಇದರ ನೇರ ಲಾಭ ಸಿಗಲಿದೆ.
2010ರ ನಂತರ ಸೇರಿದ ನೌಕರರ ಹಿತದೃಷ್ಟಿಯಿಂದ, ಸರ್ಕಾರದ ಕೊಡುಗೆಯನ್ನು ಶೇ. 10 ರಿಂದ ಶೇ. 14ಕ್ಕೆ ಹೆಚ್ಚಿಸಲಾಗಿದೆ.
ಈ ಇಡೀ ಪ್ರಕ್ರಿಯೆಗೆ ಸರ್ಕಾರ 8,170.30 ಕೋಟಿ ರೂ. ವ್ಯಯಿಸಲಿದೆ. ಇದರಲ್ಲಿ 5,822.68 ಕೋಟಿ ರೂ. ಬಾಕಿ ಹಣ ಪಾವತಿಗಾಗಿಯೇ ಮೀಸಲಿದೆ.
ನಬಾರ್ಡ್‌ನ ಗ್ರೂಪ್ ‘ಎ’, ‘ಬಿ’ ಮತ್ತು ‘ಸಿ’ ವರ್ಗದ ಉದ್ಯೋಗಿಗಳಿಗೆ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ವೇತನ ಮತ್ತು ಭತ್ಯೆಗಳಲ್ಲಿ ನೇರವಾಗಿ ಶೇ. 20 ರಷ್ಟು ಹೆಚ್ಚಳ ಮಾಡಲಾಗಿದೆ.
ಅರಿಯರ್ಸ್ ರೂಪದಲ್ಲಿ ಸುಮಾರು 510 ಕೋಟಿ ರೂ. ಹಣವನ್ನು ನೌಕರರಿಗೆ ವಿತರಿಸಲಾಗುವುದು. ಈ ನಿರ್ಧಾರದಿಂದ ನಬಾರ್ಡ್‌ನ 269 ಪಿಂಚಣಿದಾರರು ಹಾಗೂ 457 ಕುಟುಂಬ ಪಿಂಚಣಿದಾರರಿಗೆ ಪ್ರತಿ ತಿಂಗಳು ಹೆಚ್ಚಿನ ಹಣ ಕೈಸೇರಲಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸರ್ಕಾರ, “ನೌಕರರ ದೀರ್ಘಾವಧಿಯ ಸಮರ್ಪಿತ ಸೇವೆಯನ್ನು ನಾವು ಗೌರವಿಸುತ್ತೇವೆ. ಈ ನಿರ್ಧಾರವು ಅವರ ಆರ್ಥಿಕ ಯೋಗಕ್ಷೇಮ ಮತ್ತು ಸಾಮಾಜಿಕ ಭದ್ರತೆಯನ್ನು ಖಚಿತಪಡಿಸುವ ನಮ್ಮ ಬದ್ಧತೆಯ ಪ್ರತಿಬಿಂಬವಾಗಿದೆ” ಎಂದು ತಿಳಿಸಿದೆ.



