ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಸುರಕ್ಷತೆಯನ್ನು ಅಭೇದ್ಯಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ‘ಸುದರ್ಶನ ಚಕ್ರ’ಯೋಜನೆಯಡಿ ದೇಶಕ್ಕೆ ಮೂರು ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಹೊಸ 10 ರಕ್ಷಣಾ ವ್ಯವಸ್ಥೆಗಳನ್ನು ಹೊಂದುವ ಯೋಜನೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸ್ವಾನತಾ ಮಂಡಳಿ(ಡಿಎಸಿ)ಯು ತಾತ್ವಿಕ ಅನುಮೋದನೆ ನೀಡಿದೆ.
ಈ ಮೂರು ವಿಶೇಷ ವಾಯುರಕ್ಷಣಾ ವ್ಯವಸ್ಥೆಗಳಲ್ಲಿ, ಮಧ್ಯಮ ವ್ಯಾಪ್ತಿಯ ಭೂಮೇಲ್ಮೈಯಿಂದ ಗಗನಕ್ಕೆ ಚಿಮ್ಮುವ ಕ್ಷಿಪಣಿ(ಎಂಆರ್-ಎಸ್‌ಎಎಂ), ಅತ್ಯಂತ ಕಡಿಮೆ ವ್ಯಾಪ್ತಿಯ ವಾಯುರಕ್ಷಣಾ ವ್ಯವಸ್ಥೆ(ವಿ-ಎಸ್‌ಎಚ್‌ಒಆರ್‌ಎಡಿಎಸ್) ಮತ್ತು ಆಕಾಶ್ ತರಂಗ್ ಮಾನವ ರಹಿತ ವಾಯುವಾಹನ ನಿರೋಧಕ(ಯುಎವಿ)ಇಲೆಕ್ಟ್ರಾನಿಕ್ ಯುದ್ಧಾಸ್ತ್ರ ವ್ಯವಸ್ಥೆಗಳು ಸೇರಿವೆ.
ಭಾರತಕ್ಕೆ ಬಲಿಷ್ಠ ರಕ್ಷಣೆ
ಇವು ಒಟ್ಟಾಗಿ, ವ್ಯಾಪಕ ಶ್ರೇಣಿಗಳಲ್ಲಿ ಎದುರಾಗಬಹುದಾದ ವಾಯುದಾಳಿಯ ಬೆದರಿಕೆಗಳಿಂದ ಭಾರತವನ್ನು ರಕ್ಷಿಸಲು ನೆರವಾಗಲಿವೆ. ಇದರಲ್ಲಿ ಅತ್ಯಾಧುನಿಕ ಯುದ್ಧ ವಿಮಾನಗಳು, ಕ್ರೂಯೀಸ್ ಕ್ಷಿಪಣಿಗಳಿಂದ ಹಿಡಿದು ಸಣ್ಣ ಡ್ರೋನ್‌ಗಳವರೆಗಿನ ವ್ಯವಸ್ಥೆಗಳು ಒಳಗೊಂಡಿವೆ.
ಇತ್ತೀಚಿನ ವರ್ಷಗಳಲ್ಲಿ ವಾಯುರಕ್ಷಣೆಯ ಮೇಲೆ ಜಗತ್ತು ವಿಶೇಷ ಒತ್ತು ನೀಡುತ್ತಿರುವುದು ಗಮನಾರ್ಹ. ಅದರಲ್ಲೂ ಪ್ರಬಲ ರಕ್ಷಣಾ ವ್ಯವಸ್ಥೆಗಳನ್ನು ಉಧ್ವಸ್ತಗೊಳಿಸಲು ಪದೆ ಪದೆ ನಿಯೋಜಿಸಲಾಗುವ ಅಗ್ಗದ ಡ್ರೋನ್‌ಗಳ ಹೆಚ್ಚಳ ಒಂದೆಡೆಯಾದರೆ, ಇನ್ನೊಂದೆಡೆ ಪಶ್ಚಿಮ ಏಷ್ಯಾದಲ್ಲಿ ಇತ್ತೀಚೆಗೆ ಇರಾನ್ ಉತ್‌ಕ್ಷೇಪಕ ಕ್ಷಿಪಣಿಗಳನ್ನು ಮತ್ತು ಡ್ರೋನ್‌ಗಳನ್ನು ಬಳಸಿದರೆ, ಉಕ್ರೇನ್ ವಿರುದ್ಧ ರಶ್ಯಾ ಒರೆಶ್ನಿಕ್ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಬಳಸಿರುವುದು ದೇಶಗಳು ತಮ್ಮ ವಾಯುರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸುವಂತೆ ಮಾಡಿದೆ.
ಪೆಹಲ್ಗಾಮ್‌ನಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಜಿಹಾದಿ ಭಯೋತ್ಪಾದಕರು ನಡೆಸಿದ ಬರ್ಬರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ‘ಆಪರೇಶನ್ ಸಿಂದೂರ್’ ವೇಳೆ ಪಾಕಿಸ್ತಾನವು ಭಾರತದ ವಿರುದ್ಧ ವಿವಿಧ ವ್ಯಾಪ್ತಿಯ ಪ್ರಬಲ ಅಸ್ತ್ರಗಳನ್ನು ನಿಯೋಜಿಸಿತ್ತು. ಇದರಲ್ಲಿ ಸಣ್ಣ ಡ್ರೋನ್‌ಗಳ ಸಮೂಹ ಮತ್ತು ಫತಾಹ್ -ಐಐಬ್ಯಾಲಿಸ್ಟಿಕ್ ಕ್ಷಿಪಣಿಗಳು ಕೂಡ ಸೇರಿದ್ದವು. ಆದರೆ ಈ ಬೆದರಿಕೆಗಳು ನಮ್ಮ ಸೇನಾ ಆಸ್ತಿಗಳಿಗೆ ಹಾನಿ ಉಂಟು ಮಾಡುವ ಮೊದಲೇ ಅವನ್ನು ಛೇದಿಸಿ ಧ್ವಂಸಗೊಳಿಸುವ ಮೂಲಕ ಭಾರತ ಪರಾಕ್ರಮ ಮೆರೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಆಪರೇಷನ್ ಸಿಂದೂರ್ ಪರಾಕ್ರಮದಲ್ಲಿ…
ಪಾಕಿಸ್ತಾನಿ ವಾಯುಪಡೆಯು, ಪಂಜಾಬ್‌ನ ಜಲಂಧರ್ ಬಳಿಯ ಆದಂಪುರ ವಾಯುನೆಲೆಯಲ್ಲಿ ನಿಯೋಜಿತವಾಗಿದ್ದ ಭಾರತದ ಎಸ್-೪೦೦ವಾಯು ರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸುವ ಯತ್ನದಲ್ಲಿ ತನ್ನ ಸಿಎಂ-೪೦೦ಎಕೆಜಿ ಸೂಪರ್‌ಸಾನಿಕ್ ಕ್ಷಿಪಣಿಗಳನ್ನು ಕೂಡ ಪ್ರಯೋಗಿಸಿತಾದರೂ ಅವೆಲ್ಲವನ್ನೂ ಭಾರತೀಯ ವಾಯುರಕ್ಷಣಾ ವ್ಯವಸ್ಥೆಗಳು ಆಕಾಶ ಮಧ್ಯದಲ್ಲೇ ಧ್ವಂಸಗೊಳಿಸಿದ್ದವು. ಈ ದಾಳಿಗಳನ್ನು ವಿಫಲಗೊಳಿಸುವಲ್ಲಿ ಆಕಾಶ್ ಭೂಮಿಯಿಂದ ಗಗನಕ್ಕೆ ಪ್ರಯೋಗಿಸುವ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ, ದೇಶೀಯವಾಗಿಯೇ ಮೇಲ್ದರ್ಜೆಗೇರಿಸಲ್ಪಟ್ಟ ಎಲ್-೭೦ ವಾಯುರಕ್ಷಣಾ ಗನ್‌ಗಳು ಸೇರಿದಂತೆ ಅನೇಕ ಸ್ವದೇಶಿ ಸಮರಾಸ್ತ್ರ ವ್ಯವಸ್ಥೆಗಳು ಮಹತ್ವದ ಪಾತ್ರ ವಹಿಸಿದ್ದವು.
ಆ ಕಾರ್ಯಾಚರಣೆಯ ವೇಳೆ ಪಾಕಿಸ್ತಾನದ ಕೋರಿಕೆಯಂತೆ ಕದನ ವಿರಾಮಕ್ಕೆ ಒಪ್ಪಿಕೊಂಡು ‘ಆಪರೇಶನ್ ಸಿಂದೂರ್’ನ ಚಲನಶೀಲ ಹಂತವನ್ನು ಅಂತ್ಯಗೊಳಿಸಲಾಗಿದ್ದರೂ, ಭವಿಷ್ಯದಲ್ಲಿ ಭಾರತದ ಮೇಲಾಗುವ ಯಾವುದೇ ಆಕ್ರಮಣಗಳಿಂದ ದೇಶವನ್ನು ರಕ್ಷಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ರಾಷ್ಟ್ರವ್ಯಾಪಿಯಾದ ಸಮಗ್ರ ವಾಯುರಕ್ಷಣಾ ವ್ಯವಸ್ಥೆಯ ಜಾಲ ‘ಸುದರ್ಶನ ಚಕ್ರ’ಯೋಜನೆಯನ್ನು ಘೋಷಿಸಿದ್ದರು.
ಇದನ್ನೂ ಓದಿ:
ಈ ಪ್ರಸ್ತಾವಿತ ವ್ಯವಸ್ಥೆಯು, ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಹಿಡಿದು ಡ್ರೋನ್‌ಗಳ ವರೆಗಿನ ವ್ಯಾಪಕ ಶ್ರೇಣಿಯ ವಾಯುಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯದ ವಿಶಾಲ ರಾಷ್ಟ್ರೀಯ ವ್ಯಾಪ್ತಿಯ ವಾಯುರಕ್ಷಣಾ ವ್ಯವಸ್ಥೆಯೊಂದನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಎಸ್-೪೦೦ನಂತಹ ಕೆಲವು ವ್ಯವಸ್ಥೆಗಳು ಪ್ರಮುಖ ಪಾತ್ರ ವಹಿಸುವುದನ್ನು ಮುಂದುವರಿಸಿದರೂ, ಈ ಪ್ರಬಲ ರಕ್ಷಣಾ ಜಾಲದ ಬಹುತೇಕ ಘಟಕಗಳು ಸ್ವದೇಶಿಯವಾಗಿರಲಿದೆ ಎಂಬುದು ‘ಸುದರ್ಶನ ಚಕ್ರ’ಯೋಜನೆಯ ವಿಶೇಷತೆಯಾಗಿದೆ. ಇದೀಗ ಈ ಮೂರು ಹೊಸ ವಾಯುರಕ್ಷಣಾ ವ್ಯವಸ್ಥೆಗಳಿಗೆ ರಕ್ಷಣಾ ಮಂಡಳಿ ಅನುಮೋದನೆ ನೀಡಿರುವುದು ಭಾರತೀಯ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಅಭೇದ್ಯಗೊಳಿಸಲಿದೆ.
ಪ್ರಬಲ ಸಾಮರ್ಥ್ಯದ ಎಂಆರ್-ಎಸ್‌ಎಎಂ
ಈ ಮೂರು ರಕ್ಷಣಾ ವ್ಯವಸ್ಥೆಗಳಲ್ಲಿ ಎಂಆರ್-ಎಸ್‌ಎಎಂ ಅತ್ಯಂತ ಪ್ರಬಲ ಸಾಮರ್ಥ್ಯದ್ದಾಗಿದ್ದು, ಇದನ್ನು ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್(ಐಎಐ) ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗಳು ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಇದು ಬರಾಕ್-೮ಕ್ಷಿಪಣಿಯನ್ನು ಆಧರಿಸಿದ್ದು, ಭಾರತ್ ಡೈನಾಮಿಕ್ಸ್ ಲಿಮಿಟೆಡ್(ಬಿಡಿಎಲ್)ಸಂಸ್ಥೆಯು ಉತ್ಪಾದಿಸಲಿದೆ. ಇದು ೭೦ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದ್ದು, ಈ ಕ್ಷಿಪಣಿ ಮಾನವರಹಿತ ವಾಯುವಾಹನಗಳು, ಹೆಲಿಕಾಪ್ಟರ್‌ಗಳು, ಯುದ್ಧ ವಿಮಾನಗಳು ಮತ್ತು ಕ್ರೂಯಿಸ್ ಕ್ಷಿಪಣಿಗಳನ್ನು ನಾಶಗೊಳಿಸಬಲ್ಲದು. ಈ ವ್ಯವಸ್ಥೆಯು ಆಪರೇಶನ್ ಸಿಂದೂರ್ ವೇಳೆ ಸಿರ್ಸಾದಲ್ಲಿ ಹಾರಿಬಂದ ಪಾಕಿಸ್ತಾನಿ ಫತಾಹ್-ಐಐಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಧ್ವಂಸಗೊಳಿಸಿತ್ತು. ಎಂಆರ್-ಎಸ್‌ಎಎಂ ಈಗಾಗಲೇ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಸೇವೆಯಲ್ಲಿದೆ.
ದೇಶದ ರಕ್ಷಣೆಯು ವಾಯುರಕ್ಷಣೆಯಿಂದ ಆರಂಭಗೊಳ್ಳುತ್ತದೆ. ಇದು ದೇಶವನ್ನು ಮತ್ತು ತನ್ನ ಜನರನ್ನು, ಪ್ರಮುಖ ವ್ಯವಸ್ಥೆಗಳನ್ನು ವಾಯುದಾಳಿಗಳಿಂದ ರಕ್ಷಿಸುತ್ತದೆ. ಇದು ವಾಯು ಕ್ಷೇತ್ರದಲ್ಲಿ ಯಾವುದೇ ವೈರಿಗಳು ಮೇಲುಗೈ ಸಾಧಿಸದಂತೆ ಮಾಡುತ್ತದೆ. ಈ ನೆಲೆಯಲ್ಲಿ ಯೋಜಿಸಿದಾಗ ಭೂಪಡೆಗಳು ಭೂಮಿಯನ್ನು, ನೌಕಾಪಡೆ ಸಮುದ್ರ ಮಾರ್ಗದ ಮೂಲಕ ಬರುವ ಬೆದರಿಕೆಗಳನ್ನು ಹಾಗೂ ವಾಯುರಕ್ಷಣೆಯು ಆಕಾಶ ಮಾರ್ಗ ಮತ್ತು ಸಮುದ್ರ ಮಾರ್ಗಗಳೆರಡರ ಮೂಲಕ ಬರುವ ಆಕ್ರಮಣಗಳನ್ನು ನಿಗ್ರಹಿಸಲು ನೆರವಾಗುತ್ತವೆ. ಆದ್ದರಿಂದ ಬಲಿಷ್ಠ ವಾಯುರಕ್ಷಣಾ ವ್ಯವಸ್ಥೆ ಅತ್ಯಂತ ಮುಖ್ಯವಾಗುತ್ತದೆ ಎಂದು ಡಿಆರ್‌ಡಿಒದ ವಾಯುರಕ್ಷಣಾ ವ್ಯವಸ್ಥೆಯ ಪ್ರಮುಖರಾದ ಮೇ.ಜ.ಪ್ರದೀಪ್ ಗೋಸ್ವಾಮಿ ಒತ್ತಿ ಹೇಳುತ್ತಾರೆ.
ಹಾಗೆಯೇ ಅತ್ಯಂತ ಕಡಿಮೆ ವ್ಯಾಪ್ತಿಯ ವಾಯುರಕ್ಷಣಾ ವ್ಯವಸ್ಥೆ (ವಿ-ಎಸ್‌ಎಚ್‌ಒಆರ್‌ಎಡಿಎಸ್)ಕೂಡ ಇಂದು ಅತ್ಯಂತ ಮುಖ್ಯವಾಗುತ್ತದೆ.ಇದು ವಾಯುರಕ್ಷಣಾ ಪದರವೊಂದರ ಅತ್ಯಂತ ಒಳಗಿನ ಪದರವನ್ನು ರೂಪಿಸಿ ವಾಯುರಕ್ಷಣಾ ಬೆದರಿಕೆಗಳ ವಿರುದ್ಧ ಕೊನೆಯ ಸಾಲಿನ ರಕ್ಷಕನಾಗಿ ಸೇವೆ ಸಲ್ಲಿಸುತ್ತದೆ. ಇದು ಪ್ರಮುಖ ಪ್ರದೇಶಗಳು ಮತ್ತು ಪ್ರಮುಖ ಕೇಂದ್ರಗಳಾಗಿ ವಿನ್ಯಾಸಗೊಳಿಸಲಾದ ಪ್ರದೇಶಗಳನ್ನು ರಕ್ಷಿಸಲು ನಿಯೋಜಿಸಲ್ಪಡುತ್ತವೆ.
ಆಕಾಶ್ ತರಂಗ್
ಆಕಾಶ್ ತರಂಗ್ ವ್ಯವಸ್ಥೆಯು ಇಲೆಕ್ಟ್ರಾನಿಕ್ ಸಮರಾಸ್ತ್ರ ವೇದಿಕೆಯಾಗಿದ್ದು, ವೈರಿ ಡ್ರೋನ್ ಮತ್ತು ನಿರ್ವಾಹಕನ ಸಂಪರ್ಕಕೊಂಡಿಯನ್ನು ಕಡಿದುಹಾಕುವ ಮೂಲಕ ಅವುಗಳ ಕಾರ್ಯಾಚರಣಾ ಆವರ್ತನಗಳನ್ನು ಸ್ಥಗಿತಗೊಳಿಸುವ ಮೂಲಕ ಡ್ರೋನ್‌ಗಳನ್ನು ನಾಶಗೊಳಿಸುತ್ತವೆ. ಒಟ್ಟಾರೆಯಾಗಿ ಈ ವ್ಯವಸ್ಥೆಗಳು ಭಾರತದ ‘ಸುದರ್ಶನ ಚಕ್ರ’ವನ್ನು ಇನ್ನಷ್ಟು ಅಭೇದ್ಯ ವ್ಯವಸ್ಥೆಯನ್ನಾಗಿಸುತ್ತದೆ.



