Wednesday, December 24, 2025

ಅರಾವಳಿ ಪರ್ವತ ಶ್ರೇಣಿ ರಕ್ಷಣೆಗೆ ಕೇಂದ್ರ ಸರಕಾರ ಬದ್ಧ: ಹೊಸ ಗಣಿಗಾರಿಕೆ ಗುತ್ತಿಗೆ ಸಂಪೂರ್ಣ ನಿಷೇಧಿಸಿ ಆದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿಯಿಂದ ಗುಜರಾತ್​ವರೆಗೆ ಇರುವ ನೂರಾರು ಕಿಮೀ ವ್ಯಾಪ್ತಿ ಇರುವ ಅರಾವಳಿ ಪರ್ವತ ಶ್ರೇಣಿಯನ್ನು ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಇಲ್ಲಿ ಯಾವುದೇ ಹೊಸ ಮೈನಿಂಗ್​ಗೆ ಅವಕಾಶ ಕೊಡಬೇಡಿ ಎಂದು ದೆಹಲಿ, ಹರ್ಯಾಣ, ರಾಜಸ್ಥಾನ ಮತ್ತು ಗುಜರಾತ್ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ.

ಗಣಿಗಾರಿಕೆಗೆ ಅವಕಾಶ ನೀಡಲು ಅರಾವಳಿ ಬೆಟ್ಟಗಳ ಕುರಿತ ವ್ಯಾಖ್ಯಾನವನ್ನು ಬದಲಾಯಿಸಲಾಗಿದೆ ಎಂಬ ವಿವಾದದ ನಡುವೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ(MoEF&CC) ಅರಾವಳಿ ಶ್ರೇಣಿಯಲ್ಲಿ ಯಾವುದೇ ಹೊಸ ಗಣಿಗಾರಿಕೆ ಗುತ್ತಿಗೆ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ರಾಜ್ಯಗಳಿಗೆ ನಿರ್ದೇಶನ ನೀಡಿದೆ.

ಪರಿಸರ, ಭೂವೈಜ್ಞಾನಿಕ ಮತ್ತು ಭೂದೃಶ್ಯ ಮಟ್ಟದ ಪರಿಗಣನೆಗಳ ಆಧಾರದ ಮೇಲೆ, ಕೇಂದ್ರವು ಪ್ರಸ್ತುತ ನಿರ್ಬಂಧಿಸಿರುವ ಪ್ರದೇಶಗಳನ್ನು ಮೀರಿ, ಗಣಿಗಾರಿಕೆಯನ್ನು ನಿಷೇಧಿಸಬೇಕಾದ ಪ್ರದೇಶಗಳು ಅಥವಾ ವಲಯಗಳನ್ನು ಗುರುತಿಸುವಂತೆ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿಗೆ(ICFRE) ಸಚಿವಾಲಯ ಸೂಚನೆ ನೀಡಿದೆ.

ಇದಲ್ಲದೆ, ಇಡೀ ಅರಾವಳಿ ಪ್ರದೇಶಕ್ಕೆ ಸುಸ್ಥಿರ ಗಣಿಗಾರಿಕೆಗಾಗಿ ಸಮಗ್ರ, ವಿಜ್ಞಾನ ಆಧಾರಿತ ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸುವ ಕಾರ್ಯವನ್ನು ICFRE ಗೆ ವಹಿಸಲಾಗಿದೆ.

ಅಕ್ರಮ ಗಣಿಗಾರಿಕೆ ತಡೆಗಟ್ಟುವ ಮೂಲಕ ದೆಹಲಿಯಿಂದ ಗುಜರಾತ್‌ವರೆಗೆ ವ್ಯಾಪಿಸಿರುವ ಸಂಪೂರ್ಣ ಅರಾವಳಿ ಶ್ರೇಣಿಯ ಸಂರಕ್ಷಣೆ ಮತ್ತು ರಕ್ಷಣೆಯ ಉದ್ದೇಶದಿಂದ ಈ ‘ಸಂಪೂರ್ಣ ನಿಷೇಧ’ವು ಕೇಂದ್ರದ ಮಹತ್ವದ ಹೆಜ್ಜೆಯಾಗಿದೆ ಎಂದು ಸಚಿವಾಲಯ ಬಣ್ಣಿಸಿದೆ.

ಅರಾವಳಿಯ ಶೇ.90ರಷ್ಟು ಪ್ರದೇಶ ಸಂರಕ್ಷಿತವಾಗಿ ಉಳಿಯುತ್ತದೆ . ಭಾರಿ ಪ್ರಮಾಣದ ಗಣಿಗಾರಿಕೆಗೆ ಅವಕಾಶ ನೀಡಲು ಅರಾವಳಿ ಬೆಟ್ಟಗಳ ಕುರಿತ ವ್ಯಾಖ್ಯಾನವನ್ನು ಬದಲಾಯಿಸಲಾಗಿದೆ ಎಂಬ ವರದಿಗಳನ್ನು ತಿರಸ್ಕರಿಸಿದೆ. ಅಲ್ಲದೆ ಈ ಪ್ರದೇಶದಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ಸ್ಥಗಿತಗೊಳಿಸುವಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಿಸಿರುವುದನ್ನು ಉಲ್ಲೇಖಿಸಿದೆ.

ಸುಪ್ರೀಂ ಕೋರ್ಟ್ ಅನುಮೋದಿಸಿದ ನಿಯಮಾವಳಿ ಪರ್ವತಗಳಿಗೆ ರಕ್ಷಣೆ ಒದಗಿಸುತ್ತದೆ ಮತ್ತು ಸಮಗ್ರ ನಿರ್ವಹಣಾ ಯೋಜನೆಯನ್ನು ಅಂತಿಮಗೊಳಿಸುವವರೆಗೆ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ಸ್ಥಗಿತಗೊಳಿಸುತ್ತದೆ.

error: Content is protected !!