ಕಬ್ಬಿನ ರಸದಿಂದ ಎಥೆನಾಲ್ ಉತ್ಪಾದಿಸದಂತೆ ಕಾರ್ಖಾನೆಗಳಿಗೆ ಕೇಂದ್ರ ಸರಕಾರ ನಿರ್ದೇಶನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ ವರ್ಷದಿಂದ ಎಥೆನಾಲ್ ಉತ್ಪಾದಿಸಲು ಕಬ್ಬಿನ ರಸ ಬಳಸದಂತೆ ಕೇಂದ್ರ ಸರಕಾರ ಸಕ್ಕರೆ ಕಾರ್ಖಾನೆಗಳಿಗೆ ಗುರುವಾರ ನಿರ್ದೇಶನ ನೀಡಿದೆ.

ಜೊತೆಗೆ ಪೆಟ್ರೋಲ್​ನೊಂದಿಗೆ ಮಿಶ್ರಣ ಮಾಡುವ ಅಗತ್ಯವನ್ನು ಪೂರೈಸಲು ಸಕ್ಕರೆ ಕಾರ್ಖಾನೆಗಳು ಸಕ್ಕರೆ ಉತ್ಪಾದನೆಯ ಉಪ ಉತ್ಪನ್ನವಾದ ಬಿ-ಹೆವಿ ಮೊಲಾಸಿಸ್​ನಿಂದ ಎಥೆನಾಲ್ ಉತ್ಪಾದಿಸುವುದನ್ನು ಮುಂದುವರಿಸಬಹುದು ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.

ಪೆಟ್ರೋಲ್​ನೊಂದಿಗೆ ಬೆರೆಸಲು ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ತೈಲ ಕಂಪನಿಗಳಿಗೆ ಎಥೆನಾಲ್ ಪೂರೈಸಲಾಗುತ್ತದೆ. ಸಕ್ಕರೆ (ನಿಯಂತ್ರಣ) ಆದೇಶ 1966ರ ಕಲಂ 4 ಮತ್ತು 5ರ ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಿ, 2023-24 ರ ಇಎಸ್​ವೈ (ಎಥೆನಾಲ್ ಸರಬರಾಜು ವರ್ಷ) ನಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಎಥೆನಾಲ್ ತಯಾರಿಕೆಗಾಗಿ ಕಬ್ಬಿನ ರಸ / ಸಕ್ಕರೆ ಸಿರಪ್ ಅನ್ನು ಬಳಸದಂತೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಮತ್ತು ಡಿಸ್ಟಿಲರಿಗಳಿಗೆ ನಿರ್ದೇಶಿಸಲಾಗಿದೆ ಎಂದು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳಿಗೆ (ಒಎಂಸಿಗಳು) ಬಿ-ಹೆವಿ ಮೊಲಾಸಿಸ್​ನಿಂದ ತಯಾರಿಸಲಾಗುವ ಎಥೆನಾಲ್ ಪೂರೈಕೆ ಮುಂದುವರಿಯುತ್ತದೆ ಎಂದು ಆಹಾರ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಮಳೆ ಕೊರತೆಯಿಂದ ಈ ವರ್ಷ ಭಾರತದಲ್ಲಿ ಕಬ್ಬಿನ ಬೆಳೆ ಇಳುವರಿ ತೀರಾ ಕಡಿಮೆಯಾಗಿದೆ. ಹೀಗಾಗಿ ವಿಶ್ವದ ಎರಡನೇ ಅತಿದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿರುವ ಭಾರತ ಸಕ್ಕರೆ ರಫ್ತಿನ ಮೇಲೆ ನಿರ್ಬಂಧ ಹೇರಿದೆ. ಈ ನಿರ್ಬಂಧಗಳು ಅಕ್ಟೋಬರ್ 31 ರ ನಂತರವೂ ಮುಂದುವರಿದಿವೆ. ಎಥೆನಾಲ್ ಉತ್ಪಾದನೆಯನ್ನು ಸೀಮಿತಗೊಳಿಸುವುದರಿಂದ ಭಾರತದಲ್ಲಿ ಸಕ್ಕರೆ ದಾಸ್ತಾನು ಕುಸಿಯದಂತೆ ತಡೆಯಬಹುದಾಗಿದೆ.

ಇತ್ತ ಕೇಂದ್ರ ಸರ್ಕಾರವು ಸಕ್ಕರೆಯಿಂದ ಎಥೆನಾಲ್ ತಯಾರಿಸುವುದನ್ನು ನಿಲ್ಲಿಸಬಹುದು ಎಂಬ ಮಾಹಿತಿ ಬರಲು ಪ್ರಾರಂಭಿಸಿದ ಕೂಡಲೇ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಕ್ಕರೆಯ ಫ್ಯೂಚರ್ಸ್​ ದರ ನ್ಯೂಯಾರ್ಕ್ ವಿನಿಮಯ ಕೇಂದ್ರದಲ್ಲಿ ಸುಮಾರು 8 ಪ್ರತಿಶತದಷ್ಟು ಕುಸಿದಿದೆ. ಈ ನಿರ್ಧಾರದ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲಿಯೂ ಕಾಣಿಸಲಿದೆ. ಮುಂದಿನ ದಿನಗಳಲ್ಲಿ ಸಕ್ಕರೆ ಬೆಲೆ ಕಡಿಮೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!