ಬರ ಪರಿಹಾರಕ್ಕೆ ಕೇಂದ್ರ ಸರಕಾರ ಒಂದೇ ಒಂದು ಪೈಸೆಯನ್ನು ನೀಡಿಲ್ಲ: ಸಚಿವ ರಾಮಲಿಂಗಾ ರೆಡ್ಡಿ

ಹೊಸದಿಗಂತ ವರದಿ,ರಾಯಚೂರು :

ರಾಜ್ಯದ ೨೩೪ ತಾಲೂಕುಗಳಲ್ಲಿ ೨೨೪ ತಾಲೂಕುಗಳನ್ನು ಬರಗಾಲ ಎಂದು ಘೋಷಣೆ ಮಾಡಿದ್ದರು ಇಂದಿನವರೆಗೂ ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ಒಂದೇ ಒಂದು ಪೈಸೆಯನ್ನು ಇಂದಿನವರೆಗೂ ನೀಡಿಲ್ಲ. ಈ ಕುರಿತು ರಾಜ್ಯ ಬಿಜೆಪಿ ನಾಯಕರು ಕೇಂದ್ರವನ್ನು ಕೇಳದೇ ಸುಮ್ಮನಿದ್ದಾರೆ ಎಂದು ಸಚಿವ ರಾಮಲಿಂಗಾ ರೆಡ್ಡಿ ದೂರಿದರು.

ನಗರದಲ್ಲಿ ಸಾರಿಗೆ ಇಲಾಖೆಯ ಗ್ರಾಮೀಣ ಘಟಕ-೧ ವನ್ನು ಉದ್ಘಾಟಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿರುವ ೨೨ ಜಲಾಶಯಗಳಲ್ಲಿ ೨೦ ಜಲಾಶಯಗಳನ್ನು ನಿರ್ಮಿಸಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಬಿಜೆಪಿಯವರ ಅಧಿಕಾರವಧಿಯಲ್ಲಿ ರಾಜ್ಯ ಮತ್ತು ದೇಶದಲ್ಲಿ ಒಂದೇ ಒಂದು ಜಲಾಶಯವನ್ನು ನಿರ್ಮಿಸಿಲ್ಲ. ಪ್ರಸಕ್ತ ರಾಜ್ಯದಲ್ಲಿ ನೀರಿನ ಅಭಾವವಿದೆ. ಬರುವ ದಿನಗಳಲ್ಲಿ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ನೀರಿನ ಸಮಸ್ಯೆ ಆಗದಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ೩೭೦(ಜೆ) ಆಧಾರದ ಮೇಲೆ ೧೬೧೯ ಚಾಲಕರಿಗೆ ಆದೇಶ ಪತ್ರವನ್ನು ನೀಡಲಾಗಿದೆ. ೨೦೧೬ ರಲ್ಲಿ ನೇಮಕಾತಿ ನಂತರ ಆಗಿರಲಿಲ್ಲ. ಈಗ ೯೦೦೦ ಜನರಿಗೆ ಅನುಮತಿಯನ್ನು ನೀಡಲಾಗಿದೆ. ೧೩೦೦ ನಿರ್ವಾಹಕರು ಮತ್ತು ೫೦೦ ಸಿಬ್ಬಂಧಿ ವರ್ಗಗಳ ನೇಮಕ ಮಾಡಿಕೊಳ್ಳಲಾಗುವುದು.ಇದೇ ರೀತಿ ವಾಯವ್ಯ ಕರ್ನಾಟಕ, ಬಿಎಂಟಿಸಿ ಸೇರಿದಂತೆ ಎಲ್ಲ ಕಡೆಗಳಲ್ಲಿ ನೇಮಕಾತಿ ಪ್ರಕ್ರೀಯೆ ನಡೆಯುತ್ತಿದೆ ಒಟ್ಟು ೯ ಸಾವಿರ ಸಿಬ್ಬಂಧಿಗಳ ನೇಮಕ ನಡೆಯಲಿದೆ. ೨೦೧೬ ರಿಂದ ಇಲ್ಲಿಯವರೆಗೆ ೧೬ ಸಾವಿರ ಸಿಬ್ಬಂಧಿ ನಿವೃತ್ತಿ ಹೊಂದಿದ್ದಾರೆ ಎಂದರು.

ಸಾರಿಗೆ ವ್ಯವಸ್ಥೆಯ ಸುಧಾರಣೆಗೆ ಮತ್ತು ಶಕ್ತಿ ಯೋಜನೆ ಪ್ರಾರಂಭವಾದ ನಂತರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವದಕ್ಕೆ ಇದೇ ವರ್ಷ ಮೇ-ಜೂನ್ ಒಳಗಾಗಿ ೫ ಸಾವಿರ ನೂತನ ಬಸ್‌ಗಳನ್ನು ತಗೆದುಕೊಳ್ಳಲಾಗುತ್ತಿದೆ. ಪ್ರಸಕ್ತ ಇರುವ ಹಳೆಯ ಮತ್ತು ಅವಧಿ ಮೀರಿದ ಬಸ್‌ಗಳಿಗೆ ನಿವೃತ್ತಿ ನೀಡಲಗುವುದು. ನೂತನ ಬಸ್‌ಗಳು ಬಂದ ನಂತರ ಮತ್ತು ಸಿಬ್ಬಂಧಿಗಳ ನೇಮಕದ ನಂತರದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಹೆಚ್ಚಿನ ಸುಧಾರಣೆ ಆಗಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಬಸನಗೌಡ ದದ್ದಲ್ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!