ಹೊಸದಿಗಂತ ವರದಿ,ಅಂಕೋಲಾ:
ದೇಶದ ಭದ್ರತೆಯಲ್ಲಿ ಭಾರತೀಯ ತಟರಕ್ಷಣಾ ಪಡೆಯ ಪಾತ್ರ ಅತ್ಯಂತ ಮಹತ್ವದಾಗಿದ್ದು ದೇಶದ ಅತ್ಯಂತ ಬಲಿಷ್ಠ ನೌಕಾನೆಲೆ ಇರುವ ಪ್ರದೇಶದಲ್ಲಿ ಕೋಸ್ಟ್ ಗಾರ್ಡ್ ಗೆ ಶಕ್ತಿ ತುಂಬುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಅಮದಳ್ಳಿಯಲ್ಲಿ ಕೋಸ್ಟ್ ಗಾರ್ಡ್ ನ ವಸತಿ ಸೌಕರ್ಯ ಮತ್ತು ಓಟಿಎಂ ಮೂಲ ಸೌಕರ್ಯ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ತಟರಕ್ಷಣಾ ಪಡೆಗೆ ಉತ್ತಮ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು.
ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಕೋಸ್ಟ್ ಗಾರ್ಡ್, ಕರಾವಳಿ ಭದ್ರತಾ ಪಡೆಗಳ ಎಚ್ಚರಿಕೆಯ ಕಾರ್ಯದಿಂದ ದೇಶದ ಜಲಗಡಿಗಳು ಸುರಕ್ಷಿತವಾಗಿವೆ ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ನೌಕಾನೆಲೆ, ಕೋಸ್ಟ್ ಗಾರ್ಡ್, ಅಣುವಿದ್ಯುತ್ ಸ್ಥಾವರ ಸೇರಿದಂತೆ ಹಲವಾರು ಭದ್ರತಾ ಯೋಜನೆಗಳ ಕಾರಣ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸುವುದು ಅನಿವಾರ್ಯ ಎಂದರು.
ಯಾವುದೇ ಯೋಜನೆಗಳು ಬಂದರೆ ಸ್ಥಳೀಯರಿಗೆ 75 ಪ್ರತಿಶತ ಉದ್ಯೋಗ ಮೀಸಲಿಡಬೇಕು ಎಂದು ರಕ್ಷಣಾ ಸಚಿವರಲ್ಲಿ ಮನವಿ ಸಲ್ಲಿಸಲಾಗಿದೆ ಎಂದ ಅವರು ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಸ್ಥಳೀಯ ಮೀನುಗಾರರೊಂದಿಗೆ ಸೌಹಾರ್ದಯುತ ವಾತಾವರಣ ಸೃಷ್ಟಿಯಾಗಲು ಕಮಾಂಡರ್ ಮನೋಜ ಬಾಡ್ಕರ್ ಪ್ರಯತ್ನ ನಡೆಸಲಿದ್ದಾರೆ ಎಂದು ಹೇಳಿದರು.
ಕೋಸ್ಟ್ ಗಾರ್ಡ್ ನ ಪಶ್ಚಿಮ ವಿಭಾಗದ ಕಮಾಂಡರ್ ಮನೋಜ ಬಾಡ್ಕರ್ ಸ್ವಾಗತಿಸಿ ಕೋಸ್ಟ್ ಗಾರ್ಡ್ ನ ಕುರಿತು ಮಾಹಿತಿ ನೀಡಿದರು.
ಕೋಸ್ಟ್ ಗಾರ್ಡ್ ಅಧಿಕಾರಿಗಳು, ಅಮದಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತು ಸದಸ್ಯರು ಉಪಸ್ಥಿತರಿದ್ದರು.