ಜನರ ವೈದ್ಯಕೀಯ ವೆಚ್ಚ ಕಡಿಮೆ ಮಾಡಲು ಕೇಂದ್ರ ಸರ್ಕಾರ ಬದ್ಧ: ಪ್ರಧಾನಿ ಮೋದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪ್ರತಿಯೊಬ್ಬ ಭಾರತೀಯರ ವೈದ್ಯಕೀಯ ವೆಚ್ಚವನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ಮಧ್ಯಪ್ರದೇಶದ ಛತ್ತಾಪುರ ಜಿಲ್ಲೆಯಲ್ಲಿ ಬಾಗೇಶ್ವರ್ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, 2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ವೈದ್ಯಕೀಯ ಚಿಕಿತ್ಸಾ ವೆಚ್ಚಗಳು ವಿಪರೀತವಾಗಿದ್ದವು. ಆದರೆ ನಾಗರಿಕರ ವೈದ್ಯಕೀಯ ಚಿಕಿತ್ಸಾ ವೆಚ್ಚಗಳನ್ನು ಕಡಿಮೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದ್ದು, ಎಲ್ಲಾ ಅರ್ಹ ವ್ಯಕ್ತಿಗಳಿಗೆ 5 ಲಕ್ಷ ರೂಪಾಯಿಗಳವರೆಗೆ ಚಿಕಿತ್ಸಾ ವೆಚ್ಚವನ್ನು ಭರಿಸುವ ಆಯುಷ್ಮಾನ್ ಕಾರ್ಡ್​ಗಳನ್ನು ನಾವು ನೀಡುತ್ತಿದ್ದೇವೆ ಎಂದು ಹೇಳಿದರು.

ಹಲವಾರು ಧಾರ್ಮಿಕ ಸಂಸ್ಥೆಗಳು ಜೀವನದ ಆಧ್ಯಾತ್ಮಿಕ ಪಾಠಗಳ ಜೊತೆಗೆ ಉತ್ತಮ ಆರೋಗ್ಯಕ್ಕಾಗಿ ಜನರಿಗೆ ಸೇವೆ ಸಲ್ಲಿಸುತ್ತಿವೆ. ಇದಕ್ಕೆ ಚಿತ್ರಕೂಟ ಒಂದು ಉದಾಹರಣೆ. ಇನ್ನು ಮುಂದೆ ಬಾಗೇಶ್ವರ ಧಾಮಕ್ಕೆ ಭೇಟಿ ನೀಡುವ ಜನ ಕೂಡ ‘ಆರೋಗ್ಯ’ದ ಆಶೀರ್ವಾದ ಪಡೆಯಲಿದ್ದಾರೆ ಎಂದು ಅವರು ಹೇಳಿದರು.

ಯಾರಾದರೂ ಲಂಚ ಕೇಳಿದರೆ ಪತ್ರ ಬರೆಯಿರಿ
ಆಯುಷ್ಮಾನ್ ಕಾರ್ಡ್ ಹೊಂದಿರುವ 70 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮೇಲಿನವರು ಈಗ 5 ಲಕ್ಷ ರೂ.ಗಳವರೆಗೆ ಉಚಿತ ಚಿಕಿತ್ಸೆಗೆ ಅರ್ಹರಾಗಿದ್ದಾರೆ. ಅರ್ಹ ಎಲ್ಲರೂ ಆಯುಷ್ಮಾನ್ ಕಾರ್ಡ್ ಅನ್ನು ಪಡೆದುಕೊಳ್ಳಿ. ಆಯುಷ್ಮಾನ್ ಕಾರ್ಡ್ ನೀಡಲು ಯಾರಾದರೂ ಲಂಚ ಕೇಳಿದರೆ ನೇರವಾಗಿ ನನಗೆ ಪತ್ರ ಬರೆಯಿರಿ ಎಂದು ಪ್ರಧಾನಿ ಹೇಳಿದರು.

ಮಾತು ಮುಂದುವರಿಸಿ, ಬಜೆಟ್‌ನಲ್ಲಿ ಘೋಷಿಸಿದಂತೆ ಮುಂದಿನ 3 ವರ್ಷಗಳಲ್ಲಿ ದೇಶದ ಎಲ್ಲ ಜಿಲ್ಲೆಗಳಲ್ಲಿ ಕ್ಯಾನ್ಸರ್‌ ಡೇಕೇರ್‌ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದರು.

ಈ ವರ್ಷದ ಬಜೆಟ್‌ನಲ್ಲಿ ಕ್ಯಾನ್ಸರ್‌ ವಿರುದ್ದ ಹೋರಾಡಲು ವಿವಿಧ ಯೋಜನೆಗಳನ್ನು ಘೋಷಿಸಲಾಗಿದೆ. ಜತೆಗೆ ಕ್ಯಾನ್ಸರ್‌ ಔಷಧಗಳನ್ನು ಅಗ್ಗವಾಗಿಸಲು ಪಣ ತೊಟ್ಟಿದ್ದೇವೆ. ಮುಂದಿನ 3 ವರ್ಷಗಳಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿಯೂ ಕ್ಯಾನ್ಸರ್‌ ಡೇಕೇರ್‌ ಕೇಂದ್ರ ಆರಂಭವಾಗಲಿದೆʼ ಎಂದು ಮೋದಿ ತಿಳಿಸಿದರು.

ಮೋದಿ ಅವರ ತಾಯಿಯ ಹೆಸರು
ಬಾಗೇಶ್ವರ ಧಾಮ್ ವೈದ್ಯಕೀಯ ಮತ್ತು ವಿಜ್ಞಾನ ಸಂಶೋಧನಾ ಸಂಸ್ಥೆಯ ವಾರ್ಡ್‌ಗೆ ಪ್ರಧಾನಿ ಅವರ ತಾಯಿ ಹೀರಾಬೆನ್ ಮೋದಿ ಅವರ ಹೆಸರಿಡಲಾಗುವುದು ಎಂದು ಧೀರೇಂದ್ರ ಶಾಸ್ತ್ರಿ ಘೋಷಿಸಿದರು.

ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು 2ರಿಂದ 3 ವರ್ಷಗಳಲ್ಲಿ ಪೂರ್ಣಗೊಳಿಸುವ ಯೋಜನೆ ರೂಪಿಸಲಾಗಿದೆ. ಆರ್ಥಿಕವಾಗಿ ದುರ್ಬಲವಾಗಿರುವ ಕ್ಯಾನ್ಸರ್ ರೋಗಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸುವ ಗುರಿಯನ್ನು ಈ ಆಸ್ಪತ್ರೆ ಹೊಂದಿದೆ.

ಬಾಗೇಶ್ವರ ಧಾಮಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಜಟಾಶಂಕರ್ ಮಹಾದೇವರಿಗೆ ಪೂಜೆ ಸಲ್ಲಿಸಿ ಧಾರ್ಮಿಕ ಗುರುಗಳಿಂದ ಆಶೀರ್ವಾದ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!