ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ)ಗೆ ವಿನಾಯಿತಿ ಕೋರಿ ತಮಿಳುನಾಡು ಸರಕಾರ ಸಲ್ಲಿಸಿದ್ದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕಾರ ಮಾಡಿದೆ .
ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಎಂ.ಕೆ ಸ್ಟಾಲಿನ್ , ರಾಜ್ಯ ಸರ್ಕಾರ ನೀಡಿದ ವಿವರವಾದ ಸ್ಪಷ್ಟನೆ ಹೊರತಾಗಿ ಕೇಂದ್ರ ಸಚಿವರು, ಕೇಂದ್ರ ಸರ್ಕಾರ ಈ ಮಸೂದೆಯನ್ನು ತಿರಸ್ಕರಿಸಿದೆ. ಈ ನಿರ್ಧಾರವನ್ನು ಕಟುವಾಗಿ ಖಂಡಿಸಿರುವ ಸ್ಟಾಲಿನ್ ಇದು ತಮಿಳುನಾಡು ಚುನಾಯಿತ ವಿಧಾನಸಭೆಗೆ ಅವಮಾನ ಎಂದಿದ್ದಾರೆ. ಅಲ್ಲದೇ ನೀಟ್ ವಿರುದ್ಧ ಹೋರಾಟ ಇನ್ನೂ ಮುಗಿದಿಲ್ಲ. ಮುಂದಿನ ಕ್ರಮದ ಬಗ್ಗೆ ಕಾನೂನು ತಜ್ಞರೊಂದಿಗೆ ಸಮಾಲೋಚಿಸಲಾಗುವುದು ಎಂದು ಇದೇ ವೇಳೆ ಸ್ಟಾಲಿನ್ ಕಾನೂನು ಹೋರಾಟದ ಎಚ್ಚರಿಕೆಯನ್ನೂ ರವಾನಿಸಿದ್ದಾರೆ.
ರಾಜ್ಯದ ಮುಂದಿನ ನಡೆ ನಿರ್ಧರಿಸಲು ಚರ್ಚಿಸಲು ಏಪ್ರಿಲ್ 9ರಂದು ಎಲ್ಲಾ ಶಾಸಕಾಂಗ ಪಕ್ಷದ ನಾಯಕರ ಸಭೆ ಘೋಷಿಸಿದ್ದಾರೆ. ನ್ಯಾಯಸಮ್ಮತ ವೈದ್ಯಕೀಯ ಶಿಕ್ಷಣ ಎಲ್ಲರಿಗೂ ಲಭ್ಯವಾಗಲು ತಮಿಳುನಾಡು ಸರ್ಕಾರ ಅಗತ್ಯವಾದ ಎಲ್ಲಾ ಕ್ರಮಕ್ಕೆ ಮುಂದಾಗುವ ಭರವಸೆಯನ್ನು ನೀಡಿದೆ.
ಈ ವಿಚಾರವನ್ನು ತಿಳಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ನಿವೃತ್ತ ನ್ಯಾ. ಎಕೆ ರಾಜನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿತ್ತು. ಈ ಸಮಿತಿ ಶಿಫಾರಸಿನ ಆಧಾರದ ಮೇಲೆ ತಮಿಳುನಾಡು ವಿಧಾನಸಭೆಯಲ್ಲಿ 2021ರಲ್ಲಿ ನೀಟ್ನಿಂದ ವಿನಾಯಿತಿ ನೀಡುವ ಯುಜಿ ವೈದ್ಯಕೀಯ ಪದವಿ ಕೋರ್ಸ್ ಮಸೂದೆಯನ್ನು ಅವಿರೋಧವಾಗಿ ಅಂಗೀಕರಿಸಿತ್ತು. ದೀರ್ಘಕಾಲದ ವಿಳಂಬದ ಬಳಿಕ ರಾಜ್ಯಪಾಲರು ಕೂಡ ಇದಕ್ಕೆ ಸಹಿ ಹಾಕಿ ರಾಷ್ಟ್ರಪತಿಗಳ ಒಪ್ಪಿಗೆಗೆ ಕಳುಹಿಸಿದ್ದರು.