ಹೊಸದಿಗಂತ ಡಿಜಿಟಲ್ ಡೆಸ್ಕ್:
ರೈತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬದ್ಧತೆಯ ಪ್ರತಿಬಿಂಬವಾಗಿ 2023-24ನೇ ಸಾಲಿನ ಕಬ್ಬು ಬೆಳೆಗಾರರಿಗೆ ಎಫ್‍ಆರ್‌ಪಿ (ಫೇರ್ ಅಂಡ್ ರೆಮ್ಯುನರೇಟಿವ್ ಪ್ರೈಸ್) ದರವನ್ನು ಪ್ರತಿ ಟನ್‌ಗೆ 100 ರೂ ಹೆಚ್ಚಳ ಮಾಡಲು ಕೇಂದ್ರ ಸಚಿವ ಸಂಪುಟದಲ್ಲಿ ನಿರ್ಧರಿಸಿದೆ. ಈ ಮೂಲಕ ಮೋದಿ ಸರ್ಕಾರ 2014-15ನೇ ಸಾಲಿನಲ್ಲಿ ಪ್ರತಿ ಟನ್ ಗೆ 2100 ರೂ. ಇದ್ದ ಎಫ್‍ಆರ್‌ಪಿ ದರವನ್ನು 2023-24ನೇ ಸಾಲಿನಲ್ಲಿ ಟನ್‌ಗೆ 3150 ರೂ.ಗೆ ಏರಿಕೆ ಮಾಡಿದೆ. ಇದರಿಂದ 5 ಕೋಟಿ ಕಬ್ಬು ಬೆಳೆಗಾರರಿಗೆ ಮತ್ತು 5 ಲಕ್ಷ ಸಕ್ಕರೆ ಕಾರ್ಖಾನೆ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಅನುಕೂಲವಾಗಲಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಕ್ರಮವನ್ನು ಶ್ಲಾಘಿಸಿದ್ದಾರೆ.
ಯೂರಿಯಾ ರಸಗೊಬ್ಬರಕ್ಕೆ ಸಬ್ಸಿಡಿ
ಕೇಂದ್ರದ ನಿರ್ಧಾರದ ಕುರಿತು ಸಂಸದ ಈರಣ್ಣ ಕಡಾಡಿ ಅವರು ವಿವರಣೆ ನೀಡಿದ್ದು, “ಗೊಬ್ಬರದ ಬೆಲೆಗಳು ಪ್ರತಿ ವರ್ಷ ಜಾಗತಿಕವಾಗಿ ಬಹುಪಟ್ಟು ಹೆಚ್ಚಾಗುತ್ತಿವೆ. ಆದರೆ ಕೇಂದ್ರ ಸರ್ಕಾರವು ಯೂರಿಯಾ ಸಬ್ಸಿಡಿಯನ್ನು ಹೆಚ್ಚಿಸುವ ಮೂಲಕ ರಸಗೊಬ್ಬರ ಬೆಲೆ ಏರಿಕೆಯಿಂದ ರೈತರನ್ನು ರಕ್ಷಿಸುತ್ತಿದೆ. ರೈತರಿಗಾಗಿ 3 ಲಕ್ಷ 70 ಸಾವಿರ ಕೋಟಿ ರೂಪಾಯಿಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಸರಕಾರ ಅನ್ನದಾತನ ಬಾಳಿನಲ್ಲಿ ಸಮಗ್ರ ಬದಲಾವಣೆ ತರುವತ್ತ ಹೆಜ್ಜೆ ಹಾಕಿದೆ” ಎಂದು ಹೇಳಿದ್ದಾರೆ.
ರಸಗೊಬ್ಬರ ಬಳಕೆ ಕಡಿಮೆ ಮಾಡಿದ ರಾಜ್ಯಗಳಿಗೆ ಕೇಂದ್ರದಿಂದ ಸಹಾಯಧನ
“ಒಂದು ರಾಜ್ಯ 10 ಲಕ್ಷ ಟನ್ ರಾಸಾಯನಿಕ ಗೊಬ್ಬರ ಉಪಯೋಗಿಸುತ್ತಿದ್ದು ಅದನ್ನು 3 ಲಕ್ಷ ಟನ್ ಗೆ ಇಳಿಸಿದರೆ ಅದರ ಸಬ್ಸಿಡಿ ಉಳಿತಾಯ ಸುಮಾರು 3,000 ಕೋಟಿ ರೂ. ಆಗಲಿದೆ. ಈ ಪೈಕಿ ಶೇ 50ರಷ್ಟು ಅಂದರೆ 1,500 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಸಂಬಂಧಪಟ್ಟ ರಾಜ್ಯಕ್ಕೆ ನೀಡಲಿದೆ. ಇದನ್ನು ಪರ್ಯಾಯ ಗೊಬ್ಬರ ಮತ್ತು ಇತರೆ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದಾಗಿದೆ” ಎಂದು ತಿಳಿಸಿದ್ದಾರೆ.
ಈ ಐತಿಹಾಸಿಕ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಸಂಸದರು ಧನ್ಯವಾದ ಹೇಳಿದ್ದಾರೆ.