ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಣಿಕರಿಗೆ ದೊಡ್ಡ ಪರಿಹಾರವೆಂದು ಘೋಷಿಸಲಾಗಿದ್ದ ವಿಮಾನಗಳಲ್ಲಿ 60 ಶೇಕಡಾ ಸೀಟುಗಳನ್ನು ಉಚಿತವಾಗಿ ಆಯ್ಕೆ ಮಾಡುವ ನಿಯಮವನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.
ಏಪ್ರಿಲ್ 20ರಿಂದ ಜಾರಿಗೆ ಬರಬೇಕಿದ್ದ ಈ ಹೊಸ ನಿಯಮವನ್ನು ವಿಮಾನಯಾನ ಕಂಪನಿಗಳ ತೀವ್ರ ವಿರೋಧದ ಬಳಿಕ ಸರ್ಕಾರ ಹಿಂಪಡೆಯುವ ನಿರ್ಧಾರ ಕೈಗೊಂಡಿದೆ.
ಮಾರ್ಚ್ 17ರಂದು ಸಚಿವಾಲಯ ಡಿಜಿಸಿಎಗೆ ನಿರ್ದೇಶನ ನೀಡಿ, ಪ್ರತಿ ವಿಮಾನದಲ್ಲೂ ಕನಿಷ್ಠ 60% ಸೀಟುಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರಯಾಣಿಕರಿಗೆ ಆಯ್ಕೆ ಮಾಡಲು ಅವಕಾಶ ನೀಡಲು ಸೂಚಿಸಿತ್ತು. ಆದರೆ ಈ ಕ್ರಮದಿಂದ ಸೀಟು ಆಯ್ಕೆ ಶುಲ್ಕದಿಂದ ಬರುವ ಆದಾಯದಲ್ಲಿ ದೊಡ್ಡ ಮಟ್ಟದ ಕುಸಿತ ಉಂಟಾಗುತ್ತದೆ ಎಂದು ಏರ್‌ಲೈನ್ಸ್ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿದ್ದವು.
ಇದನ್ನೂ ಓದಿ:
ವಿಮಾನ ಸಂಸ್ಥೆಗಳ ವಾದದ ಪ್ರಕಾರ, ಸೀಟು ಆಯ್ಕೆ ಶುಲ್ಕದಿಂದ ಬರುವ ಆದಾಯ ಕಡಿಮೆಯಾದರೆ ಅದರ ನಷ್ಟವನ್ನು ಸರಿದೂಗಿಸಲು ಮೂಲ ಟಿಕೆಟ್ ದರಗಳನ್ನು ಹೆಚ್ಚಿಸಬೇಕಾಗುತ್ತದೆ. ವಿಶೇಷವಾಗಿ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆಗಳಿಗೆ ಈ ಆದಾಯ ಪ್ರಮುಖವಾಗಿರುವುದರಿಂದ, ನಿಯಮವು ವಾಣಿಜ್ಯ ಕಾರ್ಯಾಚರಣೆಗೆ ಹೊಡೆತ ನೀಡುತ್ತದೆ ಎಂದು ಅವರು ತಿಳಿಸಿದ್ದರು.
ಈ ಹಿನ್ನೆಲೆಯಲ್ಲಿ ಸಚಿವಾಲಯ “ಸಮಗ್ರ ಪರಿಶೀಲನೆ ಅಗತ್ಯ” ಎಂದು ಹೇಳಿ ನಿಯಮವನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಿದೆ. ಆದಾಗ್ಯೂ, ಒಂದೇ PNRನಲ್ಲಿ ಬುಕ್ ಮಾಡಿದ ಪ್ರಯಾಣಿಕರನ್ನು ಜೊತೆಯಾಗಿ ಕುಳ್ಳಿರಿಸುವಂತಹ ಇತರೆ ಪ್ರಯಾಣಿಕ ಸ್ನೇಹಿ ನಿಯಮಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಲಾಗಿದೆ.
ಪ್ರಸ್ತುತ ವ್ಯವಸ್ಥೆಯಲ್ಲಿ ಸುಮಾರು 20% ಸೀಟುಗಳು ಮಾತ್ರ ಉಚಿತ ಆಯ್ಕೆಗಾಗಿ ಲಭ್ಯವಿದ್ದು, ಉಳಿದ ಸೀಟುಗಳಿಗೆ ₹200ರಿಂದ ₹2100ರವರೆಗೆ ಶುಲ್ಕ ವಿಧಿಸಲಾಗುತ್ತಿದೆ.



