ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಂಜಿನಿಯರಿಂಗ್, ಮೆಡಿಕಲ್ ಸೇರಿ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಇಂದು ಬುಧವಾರ ಮತ್ತು ನಾಳೆ ಗುರುವಾರ ನಡೆಯಲಿದೆ.
ಇಂದು ಬೆಳಗ್ಗೆ 10.30ರಿಂದ ಭೌತಶಾಸ್ತ್ರ ಹಾಗೂ ಮಧ್ಯಾಹ್ನ 2.30ರಿಂದ ರಾಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ನಾಳೆ ಬೆಳಗ್ಗೆ ಗಣಿತ ಮತ್ತು ಮಧ್ಯಾಹ್ನ ಜೀವಶಾಸ್ತ್ರ ಪರೀಕ್ಷೆ ನಡೆಯಲಿದೆ. ಒಟ್ಟು 2.63 ಲಕ್ಷ ಮಂದಿ ಪಿಸಿಎಂಬಿ ಹಾಗೂ 67,000 ಮಂದಿ ಪಿಸಿಎಂ ವಿಷಯಗಳ ಪರೀಕ್ಷೆಗಳನ್ನು ಬರೆಯಲಿದ್ದಾರೆ.
ಬೆಂಗಳೂರಿನ 155 ಸೇರಿ ರಾಜ್ಯದ ಒಟ್ಟು 775 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಒಟ್ಟು 3.31 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಸಲು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡಲಾಗಿದೆ.
ಎಲ್ಲ ಅಭ್ಯರ್ಥಿಗಳನ್ನೂ ಪೊಲೀಸ್ ಹಾಗೂ ಗೃಹ ರಕ್ಷಕ ಸಿಬ್ಬಂದಿ ಶೋಧ ಮಾಡಿಯೇ ಒಳಬಿಡುತ್ತಾರೆ. ಮುಖಚಹರೆ ಹಾಗೂ ಕ್ಯುಆರ್‌ಕೋಡ್ ವ್ಯವಸ್ಥೆ ಮೂಲಕ ಅಭ್ಯರ್ಥಿಯ ನೈಜತೆ ಪರಿಶೀಲನೆ ಮಾಡಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಈಗಾಗಲೇ ನೀಡಿರುವ ಸೂಚನೆಯಂತೆ ಪರೀಕ್ಷಾ ಸಮಯಕ್ಕೆ ಒಂದೂವರೆ ಗಂಟೆಗೆ ಮೊದಲೇ ಕೇಂದ್ರ ತಲುಪುವುದು ಒಳ್ಳೆಯದು.
ಇದೇ ಮೊದಲ ಬಾರಿಗೆ ನಕಲಿ ಅಭ್ಯರ್ಥಿಗಳ ಕಡಿವಾಣಕ್ಕಾಗಿ ಕ್ಯೂ ಆರ್ ಸ್ಕ್ಯಾನ್ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲಿದೆ. ಕಟ್ಟುನಿಟ್ಟಾಗಿ ಸಮವಸ್ತ್ರ ಪಾಲನೆ ಮಾಡಬೇಕು. ಪರೀಕ್ಷೆಗೆ ಕುರ್ತಾ ಪೈಜಾಮ/ಜೀನ್ಸ್ ಪ್ಯಾಂಟ್, ಶೂ ನಿಷೇಧಿಸಲಾಗಿದೆ. ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋ ಫೋನ್ ಇತ್ಯಾದಿ ಎಲೆಕ್ಟ್ರಾನಿಕ್ ವಸ್ತುಗಳನ್ನು ತರುವಂತಿಲ್ಲ. ಪುರುಷ/ಮಹಿಳಾ ಅಭ್ಯರ್ಥಿಗಳು ಅರ್ಧ ತೋಳಿನ ಬಟ್ಟೆ ಧರಿಸಬೇಕು. ಸಾಧ್ಯವಾದಷ್ಟು ಕಾಲರ್ ಇಲ್ಲದಿರುವುದನ್ನು ಹಾಕಿಕೊಂಡು ಬಂದರೆ ಉತ್ತಮ. ಜೇಬು ಇಲ್ಲದ/ಕಡಿಮೆ ಜೇಬುಗಳಿರುವ ಸರಳ ಪ್ಯಾಂಟ್ ಧರಿಸಬೇಕು ಎಂದು ತಿಳಿಸಲಾಗಿದೆ.