ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ಕಾಲದಲ್ಲಿ ಟೀಂ ಇಂಡಿಯಾದ ಪ್ರಮುಖ ಸ್ಪಿನ್ ಅಸ್ತ್ರವಾಗಿದ್ದ ಯುಜ್ವೇಂದ್ರ ಚಾಹಲ್, ಕಳೆದ ಕೆಲವು ಸಮಯದಿಂದ ಫಾರ್ಮ್ ಕೊರತೆಯಿಂದಾಗಿ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದಾರೆ. ಆದರೆ, ಈಗ ನಡೆಯುತ್ತಿರುವ ಐಪಿಎಲ್ನಲ್ಲಿ ತಮ್ಮ ವೃತ್ತಿಜೀವನವನ್ನು ಮತ್ತೆ ಹಳಿಗೆ ತರಲು ಚಾಹಲ್ ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ.
ತಮ್ಮ ವೈಯಕ್ತಿಕ ಜೀವನ ಮತ್ತು ಫಿಟ್ನೆಸ್ ಬಗ್ಗೆ ಎಚ್ಚೆತ್ತುಕೊಂಡಿರುವ ಚಾಹಲ್, ಕಳೆದ 6 ತಿಂಗಳಿನಿಂದ ಮದ್ಯಪಾನವನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಈ ಆಚ್ಚರಿಯ ವಿಷಯವನ್ನು ಅವರು ತಮ್ಮ ಮಾಜಿ ಸಹ ಆಟಗಾರ ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದಾರೆ.
“ನನಗೀಗ 35 ವರ್ಷ. ಈ ವರ್ಷದ ಆರಂಭದಿಂದಲೇ ನನ್ನ ದೇಹದ ಬಗ್ಗೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದೇನೆ. ಮೈದಾನದಲ್ಲಿ ಹೆಚ್ಚು ಸಕ್ರಿಯವಾಗಿರಲು ಮತ್ತು ತಂಡಕ್ಕಾಗಿ ನನ್ನ ಶೇ. 150 ರಷ್ಟು ಶ್ರಮ ಹಾಕಲು ಮದ್ಯಪಾನದಿಂದ ದೂರ ಉಳಿದಿದ್ದೇನೆ. ಹಿರಿಯ ಆಟಗಾರನಾಗಿ ಇತರರಿಗೆ ಮಾದರಿಯಾಗುವುದು ನನ್ನ ಗುರಿ” ಎಂದು ಚಾಹಲ್ ಹೇಳಿದ್ದಾರೆ.
ಪ್ರಸ್ತುತ ಐಪಿಎಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಪರ ಆಡುತ್ತಿರುವ ಚಾಹಲ್, ಈ ಬಾರಿ ಅದ್ಭುತ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ. ಕಳೆದ ಸೀಸನ್ನ ಫೈನಲ್ ಸೋಲಿನ ಬಗ್ಗೆಯೂ ಮಾತನಾಡಿದ ಅವರು, “ಕಳೆದ ಬಾರಿ ಮಾರ್ಕೊ ಯಾನ್ಸೆನ್ ಫೈನಲ್ ಪಂದ್ಯದಲ್ಲಿ ಆಡಲು ಸಾಧ್ಯವಾಗಲಿಲ್ಲ. ಒಂದು ವೇಳೆ ಅವರು ಆಡಿದ್ದರೆ ಫಲಿತಾಂಶವೇ ಬೇರೆಯಾಗಿರುತ್ತಿತ್ತು, ನಾವು ಚಾಂಪಿಯನ್ ಆಗುತ್ತಿದ್ದೆವು” ಎಂದು ಬೇಸರ ವ್ಯಕ್ತಪಡಿಸಿದರು.
ತಮ್ಮ ಹಳೆಯ ಚರಿಷ್ಮಾವನ್ನು ಮರಳಿ ಪಡೆಯಲು ಚಾಹಲ್ ಮಾಡುತ್ತಿರುವ ಈ ‘ಮಹಾತ್ಯಾಗ’ ಅವರಿಗೆ ಟೀಂ ಇಂಡಿಯಾದ ಬಾಗಿಲು ಮತ್ತೆ ತೆರೆಯುತ್ತದೆಯೇ ಎಂದು ಕಾದು ನೋಡಬೇಕಿದೆ.



