ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗಾಗಿ ನಡೆಯುತ್ತಿರುವ ಆಂತರಿಕ ತಿಕ್ಕಾಟದ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ, ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆಯ ಪರವಾಗಿ ಪ್ರಬಲವಾದ ‘ಜಾತಿ ಅಸ್ತ್ರ’ವನ್ನು ಪ್ರಯೋಗಿಸಿದ್ದಾರೆ. ಮಂಡ್ಯದ ಕನಕ ಭವನದಲ್ಲಿ ನಡೆದ ಕುರುಬರ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರೋಕ್ಷವಾಗಿ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಸಿದ್ದರಾಮಯ್ಯನವರನ್ನು ಸಿಎಂ ಸ್ಥಾನದಲ್ಲಿ ಉಳಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದರೊಂದಿಗೆ, ಇನ್ನೂ ದಲಿತರು ಮುಖ್ಯಮಂತ್ರಿ ಆಗಿಲ್ಲ ಎಂಬ ದಾಳವನ್ನೂ ಉರುಳಿಸಿ ಒಂದೇ ಭಾಷಣದಲ್ಲಿ ಎರಡು ಪ್ರಮುಖ ಸಮುದಾಯಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ತಮ್ಮ ತಂದೆಯ ಅಧಿಕಾರವನ್ನು ಭದ್ರಪಡಿಸುವ ನಿಟ್ಟಿನಲ್ಲಿ ಯತೀಂದ್ರ ಅವರು, “ಹಿಂದುಳಿದ ವರ್ಗಗಳು ಜಾಗೃತರಾಗಿ ತಮ್ಮ ಸಮುದಾಯದ ನಾಯಕರನ್ನು ಉಳಿಸಿಕೊಳ್ಳಬೇಕು,” ಎಂದು ಕರೆ ನೀಡಿದ್ದಾರೆ.
ಅವರು ರಾಜ್ಯದ ರಾಜಕೀಯ ಇತಿಹಾಸವನ್ನು ವಿಶ್ಲೇಷಿಸಿ ಮಾತನಾಡುತ್ತಾ, “ಹಿಂದುಳಿದ ವರ್ಗದವರು ಸಾವಿರಾರು ವರ್ಷಗಳಿಂದ ಅವಕಾಶದಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿ 25 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಅದರಲ್ಲಿ ಹಿಂದುಳಿದ ವರ್ಗದ ಕೇವಲ 5 ಜನ ಮಾತ್ರ ಸಿಎಂ ಆಗಿದ್ದಾರೆ. ಆ ಐವರಲ್ಲಿ ಕೂಡ ದಲಿತರು ಇದುವರೆಗೆ ಮುಖ್ಯಮಂತ್ರಿಯಾಗಿಲ್ಲ,” ಎಂದು ವಾಸ್ತವವನ್ನು ಮುಂದಿಟ್ಟರು.
ಸಿದ್ದರಾಮಯ್ಯನವರು ಮತ್ತು ಮಾಜಿ ಸಿಎಂ ದೇವರಾಜ ಅರಸು ಅವರು ಮಾತ್ರ ಹಿಂದುಳಿದ ವರ್ಗದಿಂದ ಬಂದು 5 ವರ್ಷಗಳ ಕಾಲ ಮುಖ್ಯಮಂತ್ರಿ ಅವಧಿಯನ್ನು ಪೂರೈಸಿದ್ದಾರೆ ಎಂದು ಯತೀಂದ್ರ ಉಲ್ಲೇಖಿಸಿದ್ದಾರೆ. ಹಿಂದುಳಿದ ವರ್ಗದ ನಾಯಕರ ವಿರುದ್ಧ ನಡೆಯುವ ರಾಜಕೀಯ ಪ್ರಯತ್ನಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, “ಹಿಂದುಳಿದ ವರ್ಗದವರು ಸಣ್ಣ ತಪ್ಪು ಮಾಡಿದರೆ ಅದನ್ನು ದೊಡ್ಡದಾಗಿ ಬಿಂಬಿಸಲಾಗುತ್ತದೆ. ಇಲ್ಲದ ಹಗರಣವನ್ನು ಸೃಷ್ಟಿಸಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಾರೆ,” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಹೇಳಿಕೆಗಳು, ಮುಖ್ಯಮಂತ್ರಿ ಹುದ್ದೆಯ ಬದಲಾವಣೆ ಕುರಿತು ನಡೆಯುತ್ತಿರುವ ಊಹಾಪೋಹಗಳ ಹಿನ್ನೆಲೆಯಲ್ಲಿ, ಸಿದ್ದರಾಮಯ್ಯನವರ ಪರವಾಗಿ ಹಿಂದುಳಿದ ವರ್ಗಗಳ ಬೆಂಬಲವನ್ನು ಗಟ್ಟಿಗೊಳಿಸುವ ಸ್ಪಷ್ಟ ಪ್ರಯತ್ನವಾಗಿ ಕಾಣಿಸುತ್ತಿದೆ.

