ಹೊಸದಿಗಂತ ಡಿಜಿಟಲ್ ಡೆಸ್ಕ್ :
ಮೈಸೂರು ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ಉಡುಗೊರೆಯಾಗಿ ಬಂದ ಲಕ್ಷಾಂತರ ರೂ. ಮೌಲ್ಯದ ಸೀರೆಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಚಾಮುಂಡಿಬೆಟ್ಟದ ಕಾರ್ಯದರ್ಶಿ ರೂಪಾ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡದ್ದಾರೆ.
ಈ ಬಗ್ಗೆ ಮೈಸೂರಿನ ಕೃಷ್ಣರಾಜ ಪೊಲೀಸ್ ಠಾಣೆಗೆ ವಿಡಿಯೋ ಸಮೇತ ದೂರು ನೀಡಿದ್ದಾರೆ.
ದೇವಿಗೆ ಉಡುಗೊರೆಯಾಗಿ ಬಂದ ಸೀರೆಗಳನ್ನು ಕಾರ್ಯದರ್ಶಿ ರೂಪಾ ಕಾರಿನಲ್ಲಿ ತುಂಬಿಸಿ ಸಾಗಾಟ ಮಾಡಲಾಗುತ್ತಿದೆ. ಯುವಕನೊಬ್ಬ ಕಾರಿಗೆ ಸೀರೆ ತುಂಬಿಸಿಕೊಂಡು ಹೋಗುವ ವಿಡಿಯೋ ಸಮೇತ ಕೆಆರ್ ಪೊಲೀಸ್ ಠಾಣೆಗೆ ಸ್ನೇಹಮಯಿ ಕೃಷ್ಣ ಇದೀಗ ದೂರು ನೀಡಿದ್ದಾರೆ.
ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ ನೀಡುವ ಲಕ್ಷಾಂತರ ಮತ್ತು ಸಾವಿರಾರು ರೂಪಾಯಿ ಮೌಲ್ಯದ ಸೀರೆಗಳನ್ನು ನೌಕರರ ಮೂಲಕ ಕಳ್ಳತನ ಮಾಡುತ್ತಿರುವ ದೇವಸ್ಥಾನದ ಕಾರ್ಯದರ್ಶಿ ರೂಪ ರವರು ಸದರಿ ಸೀರೆಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ, ಮಾರಾಟ ಮಾಡಿದ ಹಣವನ್ನು ಸ್ವಂತಕ್ಕೆ ಬಳಸಿಕೊಂಡು, ಸರ್ಕಾರಕ್ಕೆ ವಂಚಿಸುವ ಮೂಲಕ ಅಪರಾಧಿಕ ನಂಬಿಕೆ ದ್ರೋಹ ಮಾಡುತ್ತಿದ್ದಾರೆ. ಇವರಿಗೆ ದೇವಸ್ಥಾನದ ಕೆಲವು ಅಧಿಕಾರಿ ಮತ್ತು ನೌಕರರು ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಭಕ್ತರು ದೇವಸ್ಥಾನಕ್ಕೆ (ಶ್ರೀ ಚಾಮುಂಡೇಶ್ವರಿ ಅಮ್ಮನವರಿಗೆ) ನೀಡಿದ ಸೀರೆಗಳು ಎಷ್ಟು? ಅವುಗಳ ಸಂಪೂರ್ಣ ಲೆಕ್ಕವನ್ನು ಸರ್ಕಾರಕ್ಕೆ ನೀಡಿರುತ್ತಾರೆಯೆ? ಎಂಬ ಅಂಶಗಳ ಬಗ್ಗೆ ತನಿಖೆ ನಡೆಸಬೇಕಿದೆ ಎಂದು ಸ್ನೇಹಮಯಿ ಕೃಷ್ಣ ದೂರಿನಲ್ಲಿ ಉಲ್ಲೇಖಿಸಿದ್ದಾರೆ.