ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೌಶಾಲ್ಯಾಭಿವೃಧಿ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಐಡಿ ವಶದಲ್ಲಿರುವ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರನ್ನು ಎಸಿಬಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಭಾನುವಾರ ಬೆಳಗ್ಗೆ ಕೋರ್ಟ್ಗೆ ಹಾಜರುಪಡಿಸಿದ ಬಳಿಕ ಸಿಐಡಿ 28 ಪುಟಗಳ ರಿಮಾಂಡ್ ವರದಿಯನ್ನು ನ್ಯಾಯಾಲಯಕ್ಕೆ ಹಸ್ತಾಂತರಿಸಿದೆ. ಎಸಿಬಿ ನ್ಯಾಯಾಲಯದಲ್ಲಿ ಚಂದ್ರಬಾಬು ಅವರ ರಿಮಾಂಡ್ ವರದಿ ವಿಚಾರಣೆ ನಡೆಯಿತು. ಚಂದ್ರಬಾಬು ಪರವಾಗಿ ವಕೀಲ ಸಿದ್ಧಾರ್ಥ ಲೋದ್ರಾ ಮತ್ತು ಸಿಐಡಿ ಪರವಾಗಿ ಹೆಚ್ಚುವರಿ ಎಜಿ ಸುಧಾಕರ್ ರೆಡ್ಡಿ ವಾದ ಮಂಡಿಸಿದರು.
ತನಿಖೆ ಪ್ರಕ್ರಿಯೆ ಆರಂಭವಾದಾಗ ಕೇವಲ 30 ವಕೀಲರು ಹಾಗೂ ಕುಟುಂಬ ಸದಸ್ಯರಿರಬೇಕು, ಅದಕ್ಕಿಂತ ಹೆಚ್ಚು ಇದ್ದರೆ ವಿಚಾರಣೆ ಪ್ರಕ್ರಿಯೆ ಆರಂಭವಾಗುವುದಿಲ್ಲ ಎಂದು ನ್ಯಾಯಾಧೀಶರು ಸೂಚಿಸಿದ ಬೆನ್ನಲ್ಲೇ 30 ಮಂದಿ ಮಾತ್ರ ಉಳಿದುಕೊಂಡಿದ್ದು, ಉಳಿದವರು ನ್ಯಾಯಾಲಯದಿಂದ ಹೊರಬಂದರು.
ಚಂದ್ರಬಾಬು ಪರವಾಗಿ ವಾದ ಆಲಿಸಲು ಮೂವರು ವಕೀಲರು ಕೇಳಿಕೊಂಡರು. ಆದರೆ, ನ್ಯಾಯಮೂರ್ತಿ ಹಿಮಾ ಬಿಂದು ಇಬ್ಬರಿಗೆ ಮಾತ್ರ ಅವಕಾಶ ನೀಡಿದ್ದು, ವಕೀಲರಾದ ಸಿದ್ಧಾರ್ಥ ಲೋದ್ರ ಮತ್ತು ಪೋಸಾನಿ ವೆಂಕಟೇಶ್ವರ ರಾವ್ ಅವರಿಗೆ ನ್ಯಾಯಾಧೀಶರು ಅನುಮತಿ ನೀಡಿದರು. ಬಳಿಕ ಎಸಿಬಿ ನ್ಯಾಯಾಲಯಕ್ಕೆ ಸಿಐಡಿ ಸಲ್ಲಿಸಿದ್ದ ರಿಮಾಂಡ್ ವರದಿಯನ್ನು ತಿರಸ್ಕರಿಸುವಂತೆ ಲೋದ್ರಾ ಮನವಿ ಮಾಡಿದರು.
ವಾದ ಮುಂದುವರೆಸಿ ವಕೀಲರು..ಸೆಕ್ಷನ್ 409 ರ ಅಡಿಯಲ್ಲಿ ಕೇಸ್ ಹಾಕುವುದು ಸರಿಯಲ್ಲ ಎಂದರು. 409ಅಡಿಯಲ್ಲಿ ಹಾಕಬೇಕು ಅಂದರೆ ಮೊದಲು ಸರಿಯಾದ ಸಾಕ್ಷಿ ತೋರಿಸಬೇಕು ಎಂಬುದನ್ನು ನ್ಯಾಯಾಲಯಕ್ಕೆ ಮನವಿ ಮಾಡಿದರು. ನಂತರ ಚಂದ್ರಬಾಬು ನಾಯ್ಡು ಕೂಡ ತಮ್ಮ ವಾದ ಆಲಿಸುವಂತೆ ನ್ಯಾಯಾಧೀಶರಲ್ಲಿ ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರಿಂದ ಸಮ್ಮತಿ ದೊರೆಯುತ್ತಿದ್ದಂತೆ, ಕೌಶಲ್ಯ ಹಗರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ರಾಜಕೀಯ ದ್ವೇಷದಿಂದಾಗಿ ನನ್ನನ್ನು ಬಂಧಿಸಲಾಗಿದೆ ಎಂದು ಚಂದ್ರಬಾಬು ನ್ಯಾಯಾಲಯದ ಗಮನಕ್ಕೆ ತಂದರು.