ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿರುವ ತೆಲುಗುದೇಶಂ ಪಾರ್ಟಿಯ (TDP) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ.
ಇದೇ ವೇಳೆಗೆ, ಕೇಂದ್ರದಲ್ಲಿ ಎನ್‌ಡಿಎ (NDA) ರಚಿಸಲಿರುವ ಸರ್ಕಾರಕ್ಕೆ ಬೆಂಬಲ ನೀಡುವಂತೆಯೂ ಕೋರಿದ್ದಾರೆ .
ಅತ್ತ ಕಾಂಗ್ರೆಸ್ ಮುಖಂಡರೂ ನಾಯ್ಡು ಅವರನ್ನು ಸಮೀಪಿಸಿದ್ದಾರೆ.ಇಂಡಿ ಒಕ್ಕೂಟ, ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಪ್ರಮುಖ ಪಾತ್ರ ವಹಿಸಲಿರುವ ಜೆಡಿಯು ಹಾಗೂ ಟಿಡಿಪಿ ಪಕ್ಷಕ್ಕೆ ಬಿಗ್ ಆಫರ್‌ಅನ್ನು ನೀಡಿದೆ. ಮೂಲಗಳ ಪ್ರಕಾರ ನಿತೀಶ್ ಕುಮಾರ್‌ಗೆ ಇಂಡಿ ಒಕ್ಕೂಟದ ನಾಯಕರು ಉಪಪ್ರಧಾನಿ ಸ್ಥಾನವನ್ನು ಆಫರ್ ಮಾಡಿದ್ದಾರೆ ಎಂದು ವರದಿಯಾಗಿದೆ. ಇನ್ನು ಆಂಧ್ರಪ್ರದೇಶದ ವಿಧಾನಸಭೆಯಲ್ಲೂ ಅಧಿಕಾರ ಪಡೆದುಕೊಂಡಿರುವ ಟಿಡಿಪಿ ಪಕ್ಷವನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಆಫರ್‌ಅನ್ನು ಚಂದ್ರಬಾಬು ನಾಯ್ಡುಗೆ ನೀಡಿದೆ ಎನ್ನಲಾಗಿದೆ.
ಆಂಧ್ರಪ್ರದೇಶದಲ್ಲಿ 175 ವಿಧಾನಸಭಾ ಸ್ಥಾನಗಳ ಪೈಕಿ ಟಿಡಿಪಿ 130ರಲ್ಲಿ ಮುನ್ನಡೆ ಸಾಧಿಸಿದೆ. ಜಗನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಕೇವಲ 15 ಸ್ಥಾನಗಳೊಂದಿಗೆ ಸೋಲೊಪ್ಪಿಕೊಂಡಿದೆ. ನಾಯ್ಡು ಮತ್ತೆ ಮುಖ್ಯಮಂತ್ರಿಯಾಗಿ ಜೂನ್ 9ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯದ 25 ಲೋಕಸಭೆ ಸ್ಥಾನಗಳಲ್ಲಿ, 16 ಸೀಟುಗಳಲ್ಲಿ ತೆಲುಗುದೇಶಂ ಪಕ್ಷ ಮುನ್ನಡೆ ಸಾಧಿಸಿದೆ. ರಾಜ್ಯದಲ್ಲಿ ಅದರ ಮಿತ್ರ ಪಕ್ಷ ಜನಸೇನೆ 2 ಹಾಗೂ ಬಿಜೆಪಿ 3 ಸ್ಥಾನಗಳಲ್ಲಿ ಮುಂದಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೆಲುಗು ದೇಶಂ ಪಕ್ಷದ (ಟಿಡಿಪಿ) ನಾಯಕರೊಂದಿಗೆ ಮುಂದಿನ ಸರಕಾರ ರಚನೆಯ ಕುರಿತು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಟಿಡಿಪಿಯು ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಜೊತೆ ಮೈತ್ರಿ ಮಾಡಿಕೊಂಡಿದೆ. 543 ಲೋಕಸಭಾ ಸ್ಥಾನಗಳ ಪೈಕಿ 238ರಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದು, ಪ್ರತಿಪಕ್ಷ ಬೆಂಬಲಿತ ಭಾರತ ಮೈತ್ರಿಕೂಟ 225 ಸ್ಥಾನಗಳಲ್ಲಿ ಮುಂದಿದೆ. ಹೀಗಾಗಿ, ಬಹುಮತದ 272ರ ಸ್ಥಾನವನ್ನು ಎಟುಕಿಸಿಕೊಳ್ಳಲು ಬಿಜೆಪಿಗೆ ಸಂಸತ್‌ನಲ್ಲಿ ಟಿಡಿಪಿಯ ಬೆಂಬಲ ಅಗತ್ಯವಾಗಿದೆ.
ಚಂದ್ರಬಾಬು, ನಿತೀಶ್ ಕಿಂಗ್ ಮೇಕರ್‌ಗಳು
2024ರ ಲೋಕಸಭಾ ಚುನಾವಣೆಯ ಫಲಿತಾಂಶಗಳು (Election Results 2024) ಪ್ರಕಟವಾಗುತ್ತಿದ್ದು, ಬಿಜೆಪಿ (BJP) ಸ್ವತಂತ್ರವಾಗಿ ಕೇಂದ್ರದಲ್ಲಿ ಸರ್ಕಾರ ರಚಿಸುವ ಕನಸು ಮಂಕಾಗಿದೆ. ಈಗ ಬಿಜೆಪಿ ತನ್ನ ಮಿತ್ರಪಕ್ಷಗಳನ್ನೇ ನೆಚ್ಚಿಕೊಳ್ಳಬೇಕಿದ್ದು, ಎನ್‌ಡಿಎ (NDA) ಮಿತ್ರಪಕ್ಷಗಳು ಕೂಡ ಆಟವಾಡುವ ಸಾಧ್ಯತೆ ಕಾಣಿಸಿದೆ. ಮುಖ್ಯವಾಗಿ ಆಂಧ್ರಪ್ರದೇಶದ ಚಂದ್ರಬಾಬು ನಾಯ್ಡು (Chandrababu Naidu) ನೇತೃತ್ವದ ತೆಲುಗುದೇಶಂ ಪಾರ್ಟಿ (TDP) ಹಾಗೂ ಬಿಹಾರದ ನಿತೀಶ ಕುಮಾರ್ (Nitish Kumar) ಕಿಂಗ್ ಮೇಕರ್‌ಗಳಾಗಲಿದ್ದಾರೆ. ಫಲಿತಾಂಶ ಗಮನಿಸಿ ಇಂಡಿಯಾ ಮೈತ್ರಿಕೂಟ (INDIA Bloc) ಕೂಡ ಚುರುಕಾಗಿದ್ದು, ಇವರಿಬ್ಬರನ್ನು ಸೆಳೆದು ಸರ್ಕಾರ ರಚಿಸಲು ಪ್ಲಾನ್ ರೂಪಿಸುತ್ತಿದೆ.
ಬಿಹಾರದ 40 ಸ್ಥಾನಗಳ ಪೈಕಿ ಜೆಡಿಯು 15ರಲ್ಲಿ ಮುನ್ನಡೆ ಸಾಧಿಸಿದ್ದರೆ, ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳಲ್ಲಿ 16ರಲ್ಲಿ ಟಿಡಿಪಿ ಮುನ್ನಡೆ ಸಾಧಿಸಿದೆ. ಎರಡೂ ಪಕ್ಷಗಳು ಪ್ರಸ್ತುತ NDAಯಲ್ಲಿವೆ. ಆದರೆ ಇವರಿಬ್ಬರೂ ಹಿಂದೆ ಮಾಡಿದಂತೆ ಮೈತ್ರಿ ಬದಲಾಯಿಸಿದರೆ ಸನ್ನಿವೇಶ ಉಲ್ಟಾ ಹೊಡೆಯುತ್ತದೆ.