ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವೇ ಕ್ಷಣಗಳಲ್ಲಿ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಮರೆಯಲಾಗದ ಮಹತ್ವದ ಕ್ಷಣ ಸೃಷ್ಟಿಯಾಗಲಿದೆ. ಈ ಕ್ಷಣಕ್ಕೂ ಮುನ್ನ ವಿಶೇಷವಾದ ಘಟನೆ ‘ಚಂದ್ರಯಾನ-3’ರ ಲಾಂಚ್ ಪ್ಯಾಡ್ ಬಳಿ ನಡೆದಿದೆ.
ಚಂದ್ರಯಾನ ಗಗನ ನೌಕೆ ಉಡಾವಣೆಗೆ ಮೊದಲೇ ಭಾರತೀಯರಿಗಾಗಿ ವಿಶೇಷವಾದ ಪುಸ್ತಕ ಬಿಡುಗಡೆಯಾಗಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಿರ್ಮಾಪಕ ಹಾಗೂ ಬರಹಗಾರ ವಿನೋದ್ ಮನಕರ್ ಅವರ ಹೊಸ ಪುಸ್ತಕವು ಚಂದ್ರಯಾನ-3ರ ಲಾಂಚ್ ಪ್ಯಾಡ್ ಬಳಿ ರಿಲೀಸ್ ಮಾಡಲಾಗಿದೆ. ಈ ಮೂಲಕ ಮತ್ತೊಂದು ವಿಶೇಷ ಕ್ಷಣಕ್ಕೆ ಚಂದ್ರಯಾನ-3 ಲಾಂಚ್ ಪ್ಯಾಡ್ ಸಾಕ್ಷಿಯಾಗಿದೆ.
ವಿಜ್ಞಾನಕ್ಕೆ ಸಂಬಂಧಿಸಿದ 50 ಲೇಖನವುಳ್ಳ ‘ಪ್ರಿಸಮ್: ದಿ ಆನಸ್ಟ್ರಲ್ ಅಬೋಡ್ ಆಫ್ ರೈನ್‌ಬೋ’ ಪುಸ್ತಕವನ್ನು ಸತೀಶ್ ಧವನ್ ಬಾಹ್ಯಕಾಶ ಕೇಂದ್ರದಲ್ಲಿ ಬಿಡುಗಡೆ ಮಾಡಲಾಯಿತು.
ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರು ಪುಸ್ತಕವನ್ನು ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದ (ವಿಎಸ್‌ಎಸ್‌ಸಿ) ನಿರ್ದೇಶಕ ಎಸ್ ಉನ್ನಿಕೃಷ್ಣನ್ ನಾಯರ್ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು.
ಬಾಹ್ಯಾಕಾಶ ವಿಜ್ಞಾನ, ಜೀವಶಾಸ್ತ್ರ, ಗಣಿತ, ಖಗೋಳಶಾಸ್ತ್ರ, ಮಾನವ ಶಾಸ್ತ್ರ ಸೇರಿದಂತೆ ಜೇಮ್ಸ್ ವೆಬ್ ಸ್ಪೇಸ್ ಟಿಲಿಸ್ಕೋಪ್, ಡಾರ್ಕ್ ಸ್ಕೈ ಟೂರಿಸಂ, ಕಪ್ಪು ಕುಳಿಗಳ ದೃಢೀಕರಣ, ಲೈಕಾ ನಾಯಿಯ ಮೊದಲ ಬಾಹ್ಯಾಕಾಶ ಪ್ರಯಾಣ ಸೇರಿದಂತೆ ಹಲವು ಆಸಕ್ತಿದಾಯಕ ಲೇಖನಗಳನ್ನು ಈ ಪುಸ್ತಕ ಒಳಗೊಂಡಿದೆ.