ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನ 104ನೇ ಸಂಚಿಕೆ ಇಂದು ಪ್ರಸಾರಗೊಂಡಿದ್ದು, ಈ ವೇಳೆ ಚಂದ್ರಯಾನ-3 ಯೋಜನೆ ನವ ಭಾರತದ ಸ್ಫೂರ್ತಿಯ ಸಂಕೇತ ಎಂದು
ಪ್ರಧಾನಿ ಶ್ಲಾಘಿಸಿದರು.
ಚಂದ್ರಯಾನ-3 ಸಾಧನೆ ಅತ್ಯಂತ ಮಹತ್ತರವಾಗಿದ್ದು, ಎಷ್ಟೇ ಚರ್ಚಿಸಿದರೂ ಸಾಲದು ಎಂದರು. ಚಂದ್ರಯಾನ ಯಶಸ್ವಿ ಯೋಜನೆಯಲ್ಲಿ ಅನೇಕ ಮಹಿಳಾ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳು ಭಾಗಿಯಾಗಿದ್ದು, ಮಹಿಳಾ ಶಕ್ತಿಗೆ ಇದು ಜೀವಂತ ಸಾಕ್ಷಿಯಾಗಿದೆ. ಭಾರತದ ಹೆಣ್ಣುಮಕ್ಕಳು ಈಗ ಅನಂತ ಬಾಹ್ಯಾಕಾಶಕ್ಕೆ ಕೊಡುಗೆ ನೀಡುತ್ತಿದ್ದಾರೆ. ಇಂದು ನಮ್ಮ ಕನಸುಗಳು ದೊಡ್ಡದಾಗಿವೆ ಮತ್ತು ನಮ್ಮ ಪ್ರಯತ್ನಗಳು ಸಹ ದೊಡ್ಡದಾಗಿವೆ ಎಂದು ಹೇಳಿದರು.
ಜಿ-20 ಶೃಂಗಸಭೆ ಆಯೋಜಿಸಲು ಭಾರತ ಸಜ್ಜು:
ಮುಂದಿನ ತಿಂಗಳು ನಡೆಯಲಿರುವ ಜಿ-20 ಶೃಂಗಸಭೆ ಆಯೋಜಿಸಲು ಭಾರತ ಸಜ್ಜಾಗಿದೆ. ಈ ಶೃಂಗಸಭೆಯಲ್ಲಿ ಭಾಗವಹಿಸಲು 40ಕ್ಕೆ ಹೆಚ್ಚು ದೇಶಗಳ ಮುಖಂಡರು ಮತ್ತು ಅನೇಕ ಜಾಗತಿಕ ಸಂಸ್ಥೆಗಳ ನಾಯಕರು ದೆಹಲಿಗೆ ಬರುತ್ತಾರೆ. ಜಿ-20 ಇತಿಹಾಸದಲ್ಲೇ ಅತಿ ದೊಡ್ಡ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು.