ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಯಲ್ಲಿ ‘ಇಂಡಿಯಾ’ ಮೈತ್ರಿಕೂಟ ಸಭೆ ನಡೆಸುತ್ತಿದ್ದು, ಈ ವೇಳೆ ಚಂದ್ರಯಾನ-3′ ಯಶಸ್ವಿಯಾದ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆಯನ್ನು (ಇಸ್ರೋ) ಅಭಿನಂದಿಸಲು ವಿ ನಿರ್ಣಯ ಅಂಗೀಕರಿಸಿದೆ.
ಮುಂಬರುವ ಲೋಕಸಭೆ ಚುನಾವಣೆಗೆ ರಣತಂತ್ರ ರೂಪಿಸುವ ಸಲುವಾಗಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮುಂಬೈನಲ್ಲಿ ಸಭೆ ನಡೆಸುತ್ತಿವೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ‘ಇಸ್ರೊದ ಚಂದ್ರಯಾನ-3 ಯೋಜನೆಯ ಯಶಸ್ಸನ್ನು ಅಭಿನಂದಿಸುವ ‘ಇಂಡಿಯಾ’ ಒಕ್ಕೂಟದ ನಿರ್ಣಯವನ್ನು ಅಂಗೀಕರಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.
ದೇಶವೇ ಹೆಮ್ಮೆ ಪಡುವಂತೆ ಮಾಡಿರುವ ಮಹೋನ್ನತ ಸಾಧನೆಗಳಿಗಾಗಿ ಇಡೀ ಇಸ್ರೊ ಕುಟುಂಬವನ್ನು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳಾದ ನಾವು ಅಭಿನಂದಿಸುತ್ತೇವೆ. ಇಸ್ರೊದ ದಕ್ಷತೆ ಮತ್ತು ಸಾಮರ್ಥ್ಯ ರೂಪುಗೊಳ್ಳಲು, ವಿಸ್ತಾರವಾಗಿ ಹಾಗೂ ಆಳವಾಗಿ ಬೇರೂರಲು ಆರು ದಶಕಗಳೇ ಬೇಕಾದವು. ಚಂದ್ರಯಾನ-3 ಯೋಜನೆಯು ಇಡೀ ವಿಶ್ವವನ್ನೇ ರೋಮಾಂಚನಗೊಳಿಸಿದೆ. ಇಸ್ರೊದ ಅಸಾಧಾರಣ ನಿರ್ವಹಣೆಯು ಸಮಾಜದಲ್ಲಿ ಮತ್ತು ಯುವ ಸಮುದಾಯದಲ್ಲಿ ವೈಜ್ಞಾನಿಕ ಮನೋಭಾವ ಹೆಚ್ಚಾಗಲು ಪ್ರೇರಣೆಯಾಗಲಿದೆ’ ಎಂದು ‘ಇಂಡಿಯಾ’ ತನ್ನ ನಿರ್ಣಯದಲ್ಲಿ ಹೇಳಿದೆ.