ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಐತಿಹಾಸಿಕ ಸಾಫ್ಟ್ ಲ್ಯಾಂಡಿಂಗ್ ಆಗಿದ್ದು, ಈ ಯಶಸ್ಸಿನ ಬಳಿಕ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರು ಇಂದು ಕೇರಳದ ತಿರುವನಂತಪುರಂನಲ್ಲಿರುವ ಪೌರ್ಣಮಿಕಾವು – ಭದ್ರಕಾಳಿ ದೇವಸ್ಥಾನ ಭೇಟಿ ನೀಡಿದರು.
ಚಂದ್ರಯಾನ-3 ಮಿಷನ್‌ನ ಯಶಸ್ಸನ್ನು ದೇಶವು ಆಚರಿಸುತ್ತಿರುವ ನಡುವೆ ಸೋಮನಾಥ್ ಅವರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಬುಧವಾರ ಚಂದ್ರಯಾನ-3 ನ ಲ್ಯಾಂಡರ್ ವಿಕ್ರಮ್ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಿದಾಗ ಇತಿಹಾಸ ಸೃಷ್ಟಿಸಿದೆ. ಭಾರತವು ಆ ಸಾಧನೆಯನ್ನು ಸಾಧಿಸಿದ ನಾಲ್ಕನೇ ದೇಶವಾಗಿದೆ ಹಾಗೂ ಅಜ್ಞಾತ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲನೆಯ ರಾಷ್ಟ್ರ ಎನಿಸಿಕೊಂಡಿದೆ.
ಭಾರತವು ಚಂದ್ರ, ಮಂಗಳ ಮತ್ತು ಶುಕ್ರಕ್ಕೆ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ನಾವು ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಬೇಕಾಗಿದೆ. ನಮಗೆ ಹೆಚ್ಚಿನ ಹೂಡಿಕೆಯ ಅಗತ್ಯವಿದೆ ಮತ್ತು ಬಾಹ್ಯಾಕಾಶ ಕ್ಷೇತ್ರವು ಅಭಿವೃದ್ಧಿ ಹೊಂದಬೇಕು ಮತ್ತು ಇದರಿಂದ ಇಡೀ ರಾಷ್ಟ್ರವು ಅಭಿವೃದ್ಧಿ ಹೊಂದಬೇಕು, ಅದು ನಮ್ಮ ಧ್ಯೇಯವಾಗಿದೆ. ಪ್ರಧಾನಿ ಮೋದಿಯವರು ನಮಗೆ ನೀಡಿದ ದೂರದೃಷ್ಟಿಯನ್ನು ಈಡೇರಿಸಲು ನಾವು ಸಿದ್ಧರಿದ್ದೇವೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ಹೇಳಿದ್ದಾರೆ.
ಈ ಮಧ್ಯೆ, ಭಾರತದ ಮೊದಲ ಸೌರ ಮಿಷನ್ ಆದಿತ್ಯ-ಎಲ್ 1 ಅನ್ನು ಸೆಪ್ಟೆಂಬರ್ ಮೊದಲ ವಾರದಲ್ಲಿ ಉಡಾವಣೆ ಮಾಡಲು ಸಂಪೂರ್ಣವಾಗಿ ಸಿದ್ಧವಾಗಿದೆ ಎಂದೂ ಇಸ್ರೋ ಮುಖ್ಯಸ್ಥರು ಹೇಳಿದರು. ಇನ್ನೆರಡು ದಿನಗಳಲ್ಲಿ ದಿನಾಂಕ ಪ್ರಕಟಿಸಲಾಗುವುದು ಎಂದೂ ಹೇಳಿದರು.