ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಕನಸಿನ ಚಂದ್ರಯಾನ 3 ಯಶಸ್ವಿಯಾಗಿ ಲ್ಯಾಂಡ್ ಆಗಲು ಕ್ಷಣಗಣನೇ ಆರಂಭಗೊಂಡಿದೆ. ಅದೇ ರೀತಿ ಆಗಸ್ಟ್ 23ರಂದು ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ.
ಒಂದು ವೇಳೆ ಆಗಸ್ಟ್ 23ಕ್ಕೆ ಸಾಧ್ಯವಾಗದಿದ್ದರೆ ಆಗಸ್ಟ್ 27ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಸಲಾಗುತ್ತದೆ ಎಂದು ಇಸ್ರೋ ಅಹಮ್ಮದಾಬಾದ್ ಕೇಂದ್ರದ ನಿರ್ದೇಶಕ ನಿಲೇಶ್ ಎಂ ದೇಸಾಯಿ ಅವರು ಹೇಳಿದ್ದಾರೆ.
ಯಾವುದೇ ಸಂಶಯವಿಲ್ಲದೇ ಚಂದ್ರಯಾನ 3 ಯಶಸ್ವಿಯಾಗುವುದು ಖಚಿತ. ನಾವು ನೌಕೆ ಉಡಾವಣೆ ಬಳಿಕ ಪ್ರತಿ ನಿಮಿಷ ಸೂಕ್ಷ್ಮವಾಗಿ ಗಮನಿಸಿದ್ದೇವೆ, ನಿರ್ವಹಣೆ ಮಾಡಿದ್ದೇವೆ. ಎಲ್ಲವೂ ಆಗಸ್ಟ್ 23 ರಂದು ವಿಕ್ರಮ್ ಲ್ಯಾಂಡರ್ ಇಳಿಸಲು ಸಿದ್ಧವಾಗಿದೆ. ಆದರೆ ಆಗಸ್ಟ್ 23 ರಂದು ಚಂದ್ರನಲ್ಲಿರುವ ವಾತಾವರಣ, ಪರಿಸ್ಥಿತಿ, ಮಾಡ್ಯುಲ್ ಸ್ಥಿತಿಗತಿ ಗಮನಿಸಿ ಲ್ಯಾಂಡ್ ಮಾಡಲಾಗುತ್ತದೆ. ಒಂದು ವೇಳೆ ಪ್ರತಿಕೂಲ ವಾತಾವರಣವಿದ್ದರೆ ಆಗಸ್ಟ್ 27ರಂದು ವಿಕ್ರಮ್ ಲ್ಯಾಂಡರ್ ಇಳಿಸಲಾಗುತ್ತದೆ ಎಂದು ನಿಲೇಶ್ ಎಂ ದೇಸಾಯಿ ಹೇಳಿದ್ದಾರೆ.
ಈ ಕುರಿತು ಆಗಸ್ಟ್ 23 ರಂದು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವುದಕ್ಕಿಂತ 2 ಗಂಟೆ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಅಂದಿನ ಪರಿಸ್ಥಿತಿ, ವಾತಾವರಣ ಗಮನಿಸಿ ಆಗಸ್ಟ್ 23ರಂದು ನಿಗಧಿತ ಸಮಯದಲ್ಲಿ ಲ್ಯಾಂಡಿಂಗ್ ಮಾಡಬೇಕಾ ಅಥವಾ ಆಗಸ್ಟ್ 27ಕ್ಕೆ ಮಂದೂಡಬೇಕಾ ಅನ್ನೋದು ನಿರ್ಧಾರವಾಗಲಿದೆ ಎಂದು ನಿಲೇಶ್ ಎಂ ದೇಸಾಯಿ ಹೇಳಿದ್ದಾರೆ.
ಇತ್ತ ಚಂದ್ರಯಾನ 3- ವಿಕ್ರಮ ಲ್ಯಾಂಡರ್ ಮತ್ತೊಂದು ಮಹತ್ವದ ಯಶಸ್ಸು ಸಾಧಿಸಿದೆ. 2019ರಲ್ಲಿ ಚಂದ್ರಯಾನ-2 ನೌಕೆಯ ಜತೆ ಉಡಾವಣೆ ಮಾಡಲಾಗಿದ್ದ, ಚಂದಿರನ ಕಕ್ಷೆಯಲ್ಲಿ ಈಗಲೂ ಸುತ್ತುತ್ತಿರುವ ಆರ್ಬಿಟರ್ ಜತೆ ಚಂದ್ರಯಾನ-3 ನೌಕೆಯ ಜತೆ ಹೋಗಿರುವ ಲೂನಾರ್ ಮಾಡ್ಯೂಲ್ ಯಶಸ್ವಿಯಾಗಿ ಸಂಪರ್ಕ ಸಾಧಿಸಿದೆ.