ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಲಿಕಾಪ್ಟರ್‌ನಲ್ಲಿ ಚಾರ್‌ಧಾಮ್ ಯಾತ್ರೆ ಮಾಡಿಸುವ ನೆಪದಲ್ಲಿ ಭಕ್ತರನ್ನು ವಂಚಿಸುತ್ತಿದ್ದ 51 ನಕಲಿ ವೆಬ್‌ಸೈಟ್‌ಗಳನ್ನು ಬ್ಲಾಕ್ ಮಾಡಲಾಗಿದೆ.
ಸೈಬರ್ ಖದೀಮರ ಕೃತ್ಯಗಳಿಗೆ ಕಡಿವಾಣ ಹಾಕುತ್ತಲೇ ಬಂದಿರುವ ಉತ್ತರಾಖಂಡ್ ವಿಶೇಷ ಕಾರ್ಯಪಡೆ ಈ ಬಾರಿ ಚಾರ್‌ಧಾಮ್ ಯಾತ್ರೆ ಆರಂಭವಾದ ದಿನದಿಂದ ಹಿಡಿದು ಇಂದಿನವರೆಗೆ 51 ನಕಲಿ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ.
ಹಿಂದೂಗಳ ಅತ್ಯಂತ ಪವಿತ್ರ ಯಾತ್ರಾಸ್ಥಳಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್, ಬದರಿನಾಥ್ ದೇವಾಲಯಗಳ ವೀಕ್ಷಣೆ ಬಯಸುವ ಭಕ್ತರು ಹೆಲಿಕಾಪ್ಟರ್ ಸೇವೆಗಾಗಿ ಆನ್‌ಲೈನ್‌ನಲ್ಲಿ ಬುಕ್ ಮಾಡುತ್ತಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಸೈಬರ್ ಖದೀಮರು, ಹೆಲಿಕಾಪ್ಟರ್ ಸೇವೆಗಳ ನೆಪದಲ್ಲಿ, ನಕಲಿ ವೆಬ್‌ಸೈಟ್ ಮತ್ತು ಜಾಹೀರಾತುಗಳ ಮೂಲಕ ಭಕ್ತರನ್ನು ವಂಚಿಸುತ್ತಿದ್ದರು.
2023ರಿಂದ ಹಲವು ವೆಬ್‌ಸೈಟ್‌ಗಳನ್ನು ನಿರ್ಬಂಧಿಸುತ್ತಿರುವ ಎಸ್‌ಟಿಎಫ್, 2023ರಲ್ಲಿ 64 ನಕಲಿ ವೆಬ್‌ಸೈಟ್‌ಗಳನ್ನು ಗುರುತಿಸಿ ನಿರ್ಬಂಧಿಸಿತ್ತು. 2024ರಲ್ಲಿ 18 ನಕಲಿ ವೆಬ್‌ಸೈಟ್‌ಗಳು, 45 ಫೇಸ್‌ಬುಕ್ ಪುಟಗಳು ಮತ್ತು 20 ಬ್ಯಾಂಕ್ ಖಾತೆಗಳನ್ನು ಗುರುತಿಸಿ ನಿರ್ಬಂಧಿಸಿತ್ತು. ಈ ವರ್ಷ (2025) 51 ನಕಲಿ ವೆಬ್‌ಸೈಟ್‌ಗಳ ನಿರ್ಬಂಧನ ಜೊತೆಗೆ ವಂಚನೆಯಲ್ಲಿ ಬಳಸಲಾಗುತ್ತಿದ್ದ 111 ಮೊಬೈಲ್ ಸಂಖ್ಯೆ, 56 ಬ್ಯಾಂಕ್ ಖಾತೆ, 30 ವಾಟ್ಸ್‌ಆ್ಯಪ್ ಸಂಖ್ಯೆಗಳನ್ನು ವರದಿ ಮಾಡಿ ನಿರ್ಬಂಧಿಸಲಾಗಿದೆ.