ಹೊಸದಿಗಂತ ವರದಿ, ಶಿವಮೊಗ್ಗ:
ಪ್ರಸ್ತುತ ಅಡಿಕೆ ಧಾರಣೆ ಕುಸಿತವಾಗಿರುವುದರಿಂದ ಆಮದು ಮಾಡಿಕೊಳ್ಳುವ ಅಡಿಕೆಗೆ ಹೆಚ್ಚಿನ ಆಮದು ಸುಂಕ ವಿಧಿಸಿ, ರೋಗಗಳಿಗೆ ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ಔಷಧವನ್ನು ಪರಿಚಯಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಲೋಕಸಭೆ ಅಧಿವೇಶನದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಕರ್ನಾಟಕದ ಅಡಿಕೆ ಬೆಳೆಗಾರರ ಹಿತ ಕಾಪಾಡಲು ಹಾಗೂ ಅಡಿಕೆ ಅಕ್ರಮ ವ್ಯಾಪಾರ ತಡೆಯಲು ಕಟ್ಟುನಿಟ್ಟಿನ ಕಾರ್ಯವಿಧಾನವನ್ನು ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.
ದೇಶದ ಒಟ್ಟು ಉತ್ಪಾದನೆಯಾದ 16 ಲಕ್ಷದ 50 ಸಾವಿರ ಮೆಟ್ರಿಕ್ ಟನ್‌ಗಳಲ್ಲಿ ಕರ್ನಾಟಕದಲ್ಲಿ ಸುಮಾರು ಶೇ.69ರಷ್ಟು ಅಡಿಕೆ ಉತ್ಪಾದಿಸಲಾಗುತ್ತಿದೆ. ಇದರ ಒಟ್ಟು ಮೌಲ್ಯ ಸುಮಾರು 8 ಸಾವಿರದ 250 ಕೋಟಿ. ಇದು ಜಿಎಸ್‌ಟಿ ಮತ್ತು ವಿವಿಧ ಉತ್ಪನ್ನಗಳ ಮೇಲೆ ಸೆಸ್ ರೂಪದಲ್ಲಿ ಬೊಕ್ಕಸಕ್ಕೆ 24 ಸಾವಿರ 750 ಕೋಟಿ ರೂಪಾಯಿಗಳ ಬೃಹತ್ ಆದಾಯವನ್ನು ನೀಡುತ್ತಿದೆ .
ದರ ಕುಸಿತ
ಮರಗಳಿಗೆ ರೋಗ ಭಾದೆ, ಬೆಲೆ ಕುಸಿತದಿಂದಾಗಿ ಬೆಳೆಗಾರರು ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದಾರೆ. ಈ ವರ್ಷದ ಸೆಪ್ಟೆಂಬರ್ ಮೊದಲ ವಾರದಲ್ಲಿ ಅಡಿಕೆ ಬೆಲೆ ಕ್ವಿಂಟಾಲ್‌ಗೆ 58,000 ರೂ. ಇದ್ದುದ್ದು ಡಿಸೆಂಬರ್ ಎರಡನೇ ವಾರದಲ್ಲಿ 39 ಸಾವಿರಕ್ಕೆ ಇಳಿದಿದೆ. ಎಲೆ ಚುಕ್ಕೆ ರೋಗದಿಂದ ಅಡಿಕೆ ಇಳುವರಿ ಕುಸಿತವಾಗಿದೆ ಎಂಬುದನ್ನು ಸದನದ ಗಮನಕ್ಕೆ ತಂದಿದ್ದಾರೆ.