ಹೊಸ ದಿಗಂತ ಡಿಜಿಟಿಲ್ ಡೆಸ್ಕ್:
ಬೆಂಗಳೂರಿನ ಐತಿಹಾಸಿಕ ಗಾಳಿ ಆಂಜನೇಯ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದುಕೊಂಡಿದೆ. ಆದ್ರೆ, ಇದನ್ನು ಪ್ರಶ್ನಿಸಿ ದೇಗುಲದ ಆಡಳಿತ ಮಂಡಳಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರ್ಕಾರದ ಈ ಕ್ರಮಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದೆ.
ಗಾಳಿ ಆಂಜನೇಯ ದೇವಾಲಯದಲ್ಲಿ ಹಣ ದುರುಪಯೋಗದ ಆರೋಪವಿದೆ. ಹೀಗಾಗಿ ಸರ್ಕಾರದ ಕ್ರಮ ಮೇಲ್ನೋಟಕ್ಕೆ ತಪ್ಪೆನ್ನಲಾಗುವುದಿಲ್ಲ ಎಂದು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.
ಗಾಳಿ ಆಂಜನೇಯಸ್ವಾಮಿ ದೇವಾಲಯದ ಆಡಳಿತವನ್ನು ಸರ್ಕಾರ ತನ್ನ ಅಧೀನಕ್ಕೆ ಪಡೆದಿದ್ದು, ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಇನ್ಮುಂದೆ ದೇವಾಲಯದ ಉಸ್ತುವಾರಿಯ ನಡೆಸಿಕೊಂಡು ಹೋಗಲಿದೆ. ದೇವಾಲಯದ ಆಡಳಿತ ಮಂಡಳಿಗೆ ಬೇರೆ ದಾರಿ ಕಾಣದೇ ಸರ್ಕಾರದ ನಿರ್ಧಾರದ ವಿರುದ್ಧ ಕೋರ್ಟ್ ಮೊರೆಹೋಗಿತ್ತು. ಆದ್ರೆ, ಇದೀಗ ಕೋರ್ಟ್ ಸಹ ಸರ್ಕಾರದ ಕ್ರಮ ಸರಿ ಇದೆ ಎಂದು ತಡೆ ನೀಡಲು ನಿರಾಕರಿಸಿದೆ.
ಕಳೆದ ವರ್ಷ ದೇವಸ್ಥಾನದ ಹುಂಡಿ ಹಣ ಎಣಿಸುವಾಗಲೇ ಆಡಳಿತ ಮಂಡಳಿಯ ಸದಸ್ಯರು ಹಣ ಎಗರಿಸಿದ್ದರು. ಹಣ ಎಗರಿಸುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಘಟನೆಯ ಬಗ್ಗೆ ವರದಿ ನೀಡುವಂತೆ ರಾಜ್ಯ ಸರ್ಕಾರ ಮುಜರಾಯಿ ಇಲಾಖೆಗೆ ಸೂಚನೆ ನೀಡಿತ್ತು. ವರದಿಯಲ್ಲಿ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ವರ್ಗಾವಣೆಗೆ ಶಿಫಾರಸ್ಸು ಮಾಡಲಾಗಿತ್ತು. ಇದನ್ನು ಒಪ್ಪಿದ ಸರ್ಕಾರ 1997ರ 42 ಮತ್ತು 43ರನ್ವಯ ಘೋಷಿತ ಸಂಸ್ಥೆ ಎಂದು ಘೋಷಣೆ ಮಾಡಿತ್ತು.