ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಧಾರ್ ದುರುಪಯೋಗವನ್ನು ತಡೆಯಲು ಭೌತಿಕ ಅಥವಾ ಎಲೆಕ್ಟ್ರಾನಿಕ್ ರೂಪದಲ್ಲಿ ಆಧಾರ್ ಕಾರ್ಡ್ ಅನ್ನು ಒಪ್ಪಿಕೊಳ್ಳುವ ಮೊದಲು ಅದನ್ನು ಪರಿಶೀಲಿಸುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಸೂಚಿಸಿದೆ ಎಂದು ಅಧಿಕೃತ ಪ್ರಕಟಣೆ ಗುರುವಾರ ತಿಳಿಸಿದೆ.
ಆಧಾರ್ ಹೊಂದಿರುವವರ ಒಪ್ಪಿಗೆಯನ್ನು ಅನುಸರಿಸಿ ಆಧಾರ್ ಸಂಖ್ಯೆಯ ಪರಿಶೀಲನೆಯು ವ್ಯಕ್ತಿಯೊಬ್ಬರು ಪ್ರಸ್ತುತಪಡಿಸಿದ ಆಧಾರ್‌ನ ಯಾವುದೇ ರೂಪದ(ಆಧಾರ್ ಪತ್ರ, ಇ-ಆಧಾರ್, ಆಧಾರ್ ಪಿವಿಸಿ ಕಾರ್ಡ್, ಮತ್ತು ಎಂ-ಆಧಾರ್) ನೈಜತೆಯನ್ನು ಸ್ಥಾಪಿಸಲು ಸರಿಯಾದ ಹಂತವಾಗಿದೆ ಎಂದು UIDAI ಹೇಳಿದೆ.
ಈ ಕ್ರಮದಿಂದ ಸಮಾಜ ವಿರೋಧಿ ಶಕ್ತಿಗಳು ಯಾವುದೇ ಸಂಭವನೀಯ ದುರುಪಯೋಗದಲ್ಲಿ ತೊಡಗುವುದನ್ನು ನಿಷೇಧಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಧಾರ್ ದಾಖಲೆಗಳನ್ನು ಟ್ಯಾಂಪರಿಂಗ್ ಮಾಡುವುದನ್ನು ಆಫ್‌ಲೈನ್ ಪರಿಶೀಲನೆಯ ಮೂಲಕ ಕಂಡುಹಿಡಿಯಬಹುದು. ಟ್ಯಾಂಪರಿಂಗ್ ಶಿಕ್ಷಾರ್ಹ ಅಪರಾಧವಾಗಿದೆ ಮತ್ತು ಆಧಾರ್ ಕಾಯಿದೆಯ ಸೆಕ್ಷನ್ 35 ರ ಅಡಿಯಲ್ಲಿ ದಂಡನೆಗೆ ಹೊಣೆಗಾರನಾಗಿರುತ್ತಾನೆ ಎಂದು ಹೇಳಲಾಗಿದೆ.
ರಾಜ್ಯ ಸರ್ಕಾರಗಳಿಗೆ ಮತ್ತು ಸಂಸ್ಥೆಗಳಿಗೆ ಬಳಕೆಗೆ ಮುನ್ನ ಪರಿಶೀಲನೆಯ ಅಗತ್ಯವನ್ನು ಒತ್ತಿಹೇಳಲು UIDAI ವಿನಂತಿಸಿದ್ದು, ಅಗತ್ಯ ನಿರ್ದೇಶನ ನೀಡುವಂತೆ ಒತ್ತಾಯಿಸಿದೆ.
mAadhaar ಅಪ್ಲಿಕೇಶನ್ ಅಥವಾ ಆಧಾರ್ QR ಕೋಡ್ ಸ್ಕ್ಯಾನರ್ ಅನ್ನು ಬಳಸಿಕೊಂಡು ಆಧಾರ್‌ನ ಎಲ್ಲಾ ಪ್ರಕಾರಗಳಲ್ಲಿ(ಆಧಾರ್ ಪತ್ರ, ಇ-ಆಧಾರ್, ಆಧಾರ್ PVC ಕಾರ್ಡ್ ಮತ್ತು m-ಆಧಾರ್) ಲಭ್ಯವಿರುವ QR ಕೋಡ್ ಅನ್ನು ಬಳಸಿಕೊಂಡು ಯಾವುದೇ ಆಧಾರ್ ಪರಿಶೀಲಿಸಬಹುದು. QR ಕೋಡ್ ಸ್ಕ್ಯಾನರ್ Android ಮತ್ತು iOS ಆಧಾರಿತ ಮೊಬೈಲ್ ಫೋನ್ ಗಳಿಗೆ ಮತ್ತು ವಿಂಡೋ ಆಧಾರಿತ ಅಪ್ಲಿಕೇಶನ್‌ಗಳಿಗೆ ಉಚಿತವಾಗಿ ಲಭ್ಯವಿದೆ ಎಂದು ಹೇಳಲಾಗಿದೆ.