ಹೊಸದಿಗಂತ ಡಿಜಿಟಲ್ ಡೆಸ್ಕ್:
ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಲಾಕ್ ತುಂಡಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಉಕ್ಕು, ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರಕಾರ ಎಲ್ಲ ಜಲಾಶಯಗಳ ಕ್ರಸ್ಟ್ ಗೇಟ್‌ಗಳ ಸ್ಥಿತಿಗತಿಗಳನ್ನು ಪರಿಶೀಲಿಸಬೇಕು ಎಂದು ಹೇಳಿದರು.
ಇದು ದೊಡ್ಡ ಅನಾಹುತ. 19ನೇ ಕ್ರಸ್ಟ್ ಗೇಟ್ ತೆರೆದುಕೊಂಡು ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಇದರಿಂದ ಜಲಾಶಯದ 60 ಟಿಎಂಸಿ ನೀರು ಖಾಲಿಯಾಗುತ್ತದೆ. ಉತ್ತಮ ಮಳೆಯಾಗಿ ಜಲಾಶಯ ತುಂಬಿತ್ತು. ಈ ನೀರನ್ನೇ ನಂಬಿಕೊಂಡಿದ್ದ ರೈತರಿಗೆ ತೊಂದರೆಯಾಗಿದೆ ಎಂದರು.
ನಾರಾಯಣಪುರ, ಆಲಮಟ್ಟಿ ಅಣೆಕಟ್ಟುಗಳಲ್ಲಿ ಸ್ಟಾಪ್ ಲಾಕ್‌ಗೇಟ್ ಅಳವಡಿಸಲಾಗಿದೆ. ತುಂಗಭದ್ರಾ ಅಣೆಕಟ್ಟೆಯಲ್ಲಿ ಸ್ಟಾಪ್ ಲಾಕ್ ಗೇಟ್ ಅಳವಡಿಸಿಲ್ಲ. ಅದಕ್ಕಾಗಿ ನೀರು ನಿಲ್ಲಿಸಲು ಸಾಧ್ಯವಾಗಿಲ್ಲ. ಇದು ರೈತರ ವಿಚಾರದಲ್ಲಿ ಚೆಲ್ಲಾಟವಾಡಿದ ಹಾಗೆಯೇ ಎಂದು ಕಿಡಿಕಾರಿದರು.
ಕೆಆರ್‌ಎಸ್ ಜಲಾಶಯ ವಿಚಾರದಲ್ಲಿ ಸರಕಾರ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಕೆಆರ್‌ಎಸ್ ಡ್ಯಾಂನಲ್ಲೂ ಸ್ಟಾಪ್ ಲಾಕ್‌ಗೇಟ್ ಇಲ್ಲ. ಆ ಅಣೆಕಟ್ಟು ಕಟ್ಟುವಾಗ ಸ್ಟಾಪ್ ಲಾಕ್ ಇಲ್ಲದ ಕಾರಣ, ಹಾಕಿರಲಿಲ್ಲ. ತುಂಗಭದ್ರಾ ಅಣೆಕಟ್ಟೆಯ ಪರಿಸ್ಥಿತಿ ಗಮನಿಸಿದರೆ ದೂರದೃಷ್ಟಿಯಿಂದ ಕೆಆರ್‌ಎಸ್‌ಗೆ ಸ್ಟಾಪ್ ಲಾಕ್ ಹಾಕಬೇಕು ಎಂದರು.