ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಡಲತೀರಗಳ ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಗ್ರೇಟರ್ ಚೆನ್ನೈ ಕಾರ್ಪೊರೇಷನ್ ಕಟ್ಟುನಿಟ್ಟಿನ ಕ್ರಮಕ್ಕೆ ಕೈಹಾಕಿದೆ. ಪ್ರಮುಖ ಬೀಚ್‌ಗಳಲ್ಲಿ ಕಸ ಎಸೆದ 241 ಮಂದಿ ನಾಗರಿಕರು ಹಾಗೂ ಅಂಗಡಿ ಮಾಲೀಕರಿಂದ ಒಟ್ಟು 1.9 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಗೊತ್ತುಪಡಿಸಿದ ಕಸದ ತೊಟ್ಟಿಗಳನ್ನು ಬಳಸದೆ ಎಲ್ಲೆಂದರಲ್ಲಿ ತ್ಯಾಜ್ಯ ಸುರಿದವರ ವಿರುದ್ಧ 26 ಮೇಲ್ವಿಚಾರಣಾ ತಂಡಗಳು ಕಾರ್ಯಾಚರಣೆ ನಡೆಸಿವೆ. ನಿಯಮ ಉಲ್ಲಂಘನೆ ಮಾಡಿದವರಿಗೆ ಸ್ಥಳದಲ್ಲೇ ಗರಿಷ್ಠ 5,000 ರೂಪಾಯಿವರೆಗೆ ದಂಡ ವಿಧಿಸಲಾಗಿದೆ.
ದಂಡ ಸಂಗ್ರಹದಲ್ಲಿ ಪಲವಕ್ಕಂ ಬೀಚ್ ಮೊದಲ ಸ್ಥಾನದಲ್ಲಿದ್ದು 46,500 ರೂಪಾಯಿ ವಸೂಲಾಗಿದೆ. ಮರೀನಾ ಬೀಚ್‌ನಲ್ಲಿ 41,500 ರೂಪಾಯಿ ಹಾಗೂ ತಿರುವನ್ಮಿಯೂರ್ ಬೀಚ್‌ನಲ್ಲಿ ಕನಿಷ್ಠ 18,200 ರೂಪಾಯಿ ದಂಡ ಸಂಗ್ರಹವಾಗಿದೆ. ಪೊಂಗಲ್ ಹಬ್ಬದ ಸಂದರ್ಭ ಜನಸಂದಣಿ ಹೆಚ್ಚಾಗುವ ಹಿನ್ನೆಲೆಯಲ್ಲಿ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿತ್ತು.
ಜನವರಿ 14ರಿಂದ 17ರವರೆಗೆ ನಡೆದ ವಿಶೇಷ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಕಡಲತೀರ ಪ್ರದೇಶಗಳಿಂದ 233.88 ಟನ್ ಘನ ತ್ಯಾಜ್ಯವನ್ನು ಸಂಗ್ರಹಿಸಿ ವಿಲೇವಾರಿ ಮಾಡಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವುದು ಕಾನೂನುಬಾಹಿರವಾಗಿದ್ದು, ಇದರಿಂದ ಪರಿಸರ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಹಾನಿಯಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.


