ಹೊಸದಿಗಂತ ಡಿಜಿಟಲ್ ಡೆಸ್ಕ್:
ರವೀಂದ್ರ ಜಡೇಜಾ ಆಲ್ರೌಂಡ್ ಆಟದ ನೆರವಿನಿಂದ ಪಂಜಾಬ್ ಕಿಂಗ್ಸ್ ಎದುರು ಚೆನ್ನೈ ಸೂಪರ್ ಕಿಂಗ್ಸ್ ತಂಡವು 28 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಈ ಗೆಲುವಿನೊಂದಿಗೆ ಸಿಎಸ್‌ಕೆ ತಂಡವು ಲಖನೌ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ.
ಹಿಮಾಚಲ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಗೆಲ್ಲಲು 168 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ಜಾನಿ ಬೇರ್‌ಸ್ಟೋವ್(7) ಹಾಗೂ ರಿಲೇ ರೂಸ್ಸೌ(0) ವಿಕೆಟ್ ಕಳೆದುಕೊಂಡಿತು. ಕೇವಲ 9 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಕಂಗಾಲಾಗಿದ್ದ ಪಂಜಾಬ್ ತಂಡಕ್ಕೆ ಮೂರನೇ ವಿಕೆಟ್‌ಗೆ ಪ್ರಭ್‌ಸಿಮ್ರನ್ ಸಿಂಗ್ ಹಾಗೂ ಶಶಾಂಕ್ ಸಿಂಗ್ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 53 ರನ್‌ಗಳ ಜತೆಯಾಟವಾಡಿದರು. ಶಶಾಂಕ್ ಸಿಂಗ್ 27 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಪ್ರಭ್‌ಸಿಮ್ರನ್ ಸಿಂಗ್ 30 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
ಇನ್ನು ಈ ಜೋಡಿ ಬೇರ್ಪಡುತ್ತಿದ್ದಂತೆಯೇ ಪಂಜಾಬ್ ಕಿಂಗ್ಸ್ ತಂಡವು ನಾಟಕೀಯ ಕುಸಿತ ಕಂಡಿತು. ಒಂದು ಹಂತದಲ್ಲಿ 62 ರನ್‌ಗಳವರೆಗೆ ಕೇವಲ ಎರಡು ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ಆ ಬಳಿಕ 90 ರನ್ ಗಳಿಸುವಷ್ಟರಲ್ಲಿ 8 ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಋತುರಾಜ್ ಗಾಯಕ್ವಾಡ್(32), ಡ್ಯಾರೆಲ್ ಮಿಚೆಲ್(30) ಹಾಗೂ ರವೀಂದ್ರ ಜಡೇಜಾ(43) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಬಾರಿಸಿತ್ತು.