ಹೊಸದಿಗಂತ ಡಿಜಿಟಲ್ ಡೆಸ್ಕ್:
‘ನಕ್ಸಲರ ಶರಣಾಗತಿ, ಸಂತ್ರಸ್ತರ ಪುನವರ್ಸತಿ ನೀತಿ ಯೋಜನೆ–2025’ಕ್ಕೆ ಸಂಬಂಧಿಸಿದಂತೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲು ಛತ್ತೀಸಗಢದ ಗೃಹ ಇಲಾಖೆಯು ಅಧಿಸೂಚನೆ ಹೊರಡಿಸಿದೆ.
ನಕ್ಸಲ್ ಹಿಂಸಾಪೀಡಿತ ಪ್ರದೇಶಗಳ ಸಂತ್ರಸ್ತರಿಗೆ ಹೊಸ ನೀತಿಯಂತೆ, ಹೆಚ್ಚಿನ ಪರಿಹಾರ ಮೊತ್ತ, ಉಚಿತ ಶಿಕ್ಷಣ, ಆರೋಗ್ಯ ವ್ಯವಸ್ಥೆ ಕಲ್ಪಿಸುವ ಗುರಿ ಹೊಂದಲಾಗಿದೆ. ಅದೇ ರೀತಿ, ಸರ್ಕಾರದ ಮುಂದೆ ಶರಣಾಗುವ ನಕ್ಸಲರಿಗೆ ಹೊಸ ಜೀವನ ನಡೆಸಲು ಪುನರ್ವಸತಿ ವ್ಯವಸ್ಥೆ, ಕಾನೂನು ನೆರವು ನೀಡಲಾಗುವುದು’ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರವೇ ಹೊಸ ಪೋರ್ಟಲ್ ರಚಿಸಲಿದ್ದು, ಇದರಲ್ಲಿ ಶರಣಾದ ನಕ್ಸಲರು ಹಾಗೂ ಸಂತ್ರಸ್ತರು ಹೆಸರು ನೋಂದಣಿ ಮಾಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ವಿಶೇಷ ಗುರುತಿನ ಸಂಖ್ಯೆ ನೀಡಲಾಗುವುದು. ಸಂತ್ರಸ್ತರಿಗೆ ಸರ್ಕಾರದಿಂದ ತಲುಪಬೇಕಿರುವ ಅಗತ್ಯ ನೆರವು ಹಾಗೂ ಪುನರ್ವಸತಿ ಕುರಿತು ಸಂಬಂಧಪಟ್ಟ ಅಧಿಕಾರಿಗಳು ನಿರಂತರ ನಿಗಾವಹಿಸಲಿದ್ದಾರೆ.