March 22, 2026
Sunday, March 22, 2026
spot_img

ಸಮಸ್ಯೆಗಳ ಕುರಿತು ಮಾತನಾಡದೆ ಬಿಜೆಪಿ ಟೀಕಿಸಲು ಜಿಲ್ಲೆಗೆ ಬಂದ ಮುಖ್ಯಮಂತ್ರಿ: ಸದಾನಂದ ಭಟ್

ಹೊಸದಿಗಂತ ವರದಿ,ಶಿರಸಿ:

ಉ.ಕ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಯಾವುದೇ ಮಾತನಾಡದ ಮುಖ್ಯಮಂತ್ರಿಗಳ ಪ್ರವಾಸದ ಫಲ ಶ್ರುತಿ ಏನು ಎಂದು ಬಿಜೆಪಿ ಜಿಲ್ಲಾ ವಕ್ತಾರ ಸದಾನಂದ ಭಟ್ ನಿಡುಗೋಡ್ ಪ್ರಶ್ನೆ ಮಾಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು 22ರಂದು ಜಿಲ್ಲೆಗೆ ಭೇಟಿ ನೀಡಿದಾಗ ಜಿಲ್ಲೆಯ ಜನತೆಯ ಜ್ವಲಂತ ಸಮಸ್ಯೆಗಳ ಕುರಿತು ಕಿಂಚಿತ್ತು ಗಮನಹರಿಸದೆ ಈ ಕುರಿತು ತಮ್ಮ ಮಾತುಗಳಲ್ಲಿ ಯಾವುದೇ ಉಲ್ಲೇಖ ಮಾಡದೆ ಇರುವುದು ವಿಷಾದನೀಯ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಹು ಚರ್ಚಿತವಾಗಿ ಜನರ ತೀವ್ರ ವಿರೋಧಕ್ಕೆ ಕಾರಣವಾದ ನದಿ ತಿರುವು ಯೋಜನೆಗಳು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ, ಬಂದರುಗಳ ಕಾಮಗಾರಿ, ಅರಣ್ಯ ಅತಿಕ್ರಮಣ ಸಮಸ್ಯೆ ಮತ್ತು ಎಲೆ ಚುಕ್ಕೆ ರೋಗದಿಂದ ಸಂಕಷ್ಟದಲ್ಲಿರುವ ರೈತರ ವಿಚಾರಗಳಿಗೆ ಯಾವುದೇ ರೀತಿಯಲ್ಲಿ ಗಮನಹರಿಸಿದಂತೆ ಕಂಡುಬಂದಿಲ್ಲ. ಈ ವಿಷಯಗಳ ಕುರಿತು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಗಳು ಯಾವುದೇ ಪ್ರಸ್ತಾಪ ಮಾಡದಿರುವುದನ್ನು ನೋಡಿದರೆ ಮುಖ್ಯಮಂತ್ರಿಗಳ ಪ್ರವಾಸ ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿಯನ್ನು ಟೀಕಿಸುವ ಉದ್ದೇಶಕ್ಕಾಗಿ ಎಂದು ಭಾಸವಾಗುತ್ತಿದೆ. ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಕಾಂಗ್ರೆಸ್ ಶಾಸಕರುಗಳು ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳಿಗೆ ತಿಳಿಸಿ ಈ ಕುರಿತು ಯಾವ ಮನವಿ ನೀಡಿದ್ದಾರೆ ಎನ್ನುವುದನ್ನು ತಿಳಿಸಲಿ ಎಂದಿದ್ದಾರೆ.

ಹಿಂದಿನ ಬಿಜೆಪಿ ಕಾಂಗ್ರೆಸ್ ಸರಕಾರಗಳ ಕಾಲದಿಂದ ಆರಂಭಗೊಂಡು ನಡೆದ ಕಾಮಗಾರಿಗಳ ಉದ್ಘಾಟನೆ ಮಾಡಿ ಅಭಿವೃದ್ಧಿ ಎಲ್ಲವನ್ನೂ ಕೇವಲ ಕಾಂಗ್ರೆಸ್ ಮಾತ್ರ ಮಾಡಿದೆ ಎನ್ನುವ ರೀತಿಯಲ್ಲಿ ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಮಾತನಾಡಿದ್ದು ಕೇವಲ ರಾಜಕೀಯ ಉದ್ದೇಶಗಳಿಗೆ ಎನ್ನುವುದು ಸ್ಪಷ್ಟವಾಗಿದೆ. ಬರುವ ಬಜೆಟ್ ನಲ್ಲಿ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುತ್ತೇವೆ ಎಂದಿರುವುದು ಸ್ವಾಗತಾರ್ಹವಾದರೂ, ಕಾರವಾರದ ಕ್ರಿಮ್ಸ್ ಆಸ್ಪತ್ರೆ ಮತ್ತು ಶಿರಸಿಯ ಪಂಡಿತ್ ಜನರಲ್ ಆಸ್ಪತ್ರೆಗಳಿಗೆ ಅಗತ್ಯವಾದ ವೈದ್ಯಕೀಯ ಉಪಕರಣಗಳು ಮತ್ತು ನುರಿತ ವೈದ್ಯರುಗಳ ನಿಯೋಜನೆಯನ್ನು ಮಾಡದೆ ಕೇವಲ ಬಜೆಟ್ ನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಸ್ಥಾಪಿಸುತ್ತೇವೆ ಎಂದು ಘೋಷಿಸುವುದು ಜಿಲ್ಲೆಯ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಆಗಬಾರದು. ಜಿಲ್ಲೆಯ ಎಲ್ಲಾ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಲಮಿತಿಯಲ್ಲಿ ವೈದ್ಯಕೀಯ ಸೇವೆ ದೊರಕುವಂತಹ ಕ್ರಮ ಕೈಗೊಳ್ಳಬೇಕು.

ಇನ್ನು ಮುಂದಾದರೂ ಜಿಲ್ಲೆಯ ಕಾಂಗ್ರೆಸ್ ಶಾಸಕ ಸಚಿವರು ರಾಜ್ಯ ಸರಕಾರಕ್ಕೆ ಜಿಲ್ಲೆಯ ಜನವಿರೋಧಿ ಯೋಜನೆಗಳ ಕುರಿತು ತಿಳಿಸಿ, ಯೋಜನೆಗಳ ಡಿಪಿಆರನ್ನು ಕೈಬಿಡಲು ಆಗ್ರಹಿಸಲಿ. ರಾಜ್ಯ ಬಜೆಟ್ಟಿನಲ್ಲಿ ಜಿಲ್ಲೆಗೆ ನ್ಯಾಯ ದೊರಕುವಂತೆ ಮಾಡಿಕೊಡಲಿ ಎಂದು ಹೇಳಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !