ದಿಗಂತ ವರದಿ ಮಂಡ್ಯ :
ಅಗ್ನಿ ಅನಾಹುತ ಸೇರಿದಂತೆ ಹಲವು ಪ್ರಕೃತಿ ವಿಕೋಪಗಳಂತಹ ಸಂದರ್ಭದಲ್ಲಿ ಸವಾಲನ್ನು ಎದುರಿಸಿ ಹೋರಾಟ ಮಾಡಿ ಸಾರ್ವಜನಿಕರ ಆಸ್ತಿ-ಪ್ರಾಸ್ತಿ, ಪ್ರಾಣ ರಕ್ಷಿಸುಂತಹ ಅಗ್ನಿ ಶಾಮಕ ಮತ್ತು ತುರ್ತು ಸೇವಾ ಇಲಾಖೆಯ ಮಂಡ್ಯ ಮಂಡ್ಯ ಠಾಣೆಯ ಪ್ರಮುಖ ಅಗ್ನಿಶಾಮಕರಿಬ್ಬರಿಗೆ ಮುಖ್ಯಮಂತ್ರಿ ಪದಕ ಲಭಿಸಿದ್ದು, ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರದಾನ ಮಾಡಿದರು.
ಮಂಡ್ಯ ಅಗ್ನಿಶಾಮಕ ಠಾಣೆಯ ಪ್ರಮುಖ ಅಗ್ನಿಶಾಮಕರಾದ ಪ್ರಭಾಕರ್ ಶೆಟ್ಟಿ ಹಾಗೂ ಪಾಂಡವಪುರ ಅಗ್ನಿಶಾಮಕ ಠಾಣೆಯ ಹರೀಶ್ ಎನ್.ಎಸ್. ಅವರಿಗೆ ಬೆಂಗಳೂರಿನ ಮುಂಡ್ಕೂರು ಅಗ್ನಿಶಾಮಕ ಅಕಾಡೆಮಿಯಲ್ಲಿ ನಡೆದ ಕಾರ‌್ಯಕ್ರಮದಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು 2024ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರದಾನ ಮಾಡಿ ಗೌರವಿಸಿದರು.
ಯಾವುದೇ ಅನಾಹುತಗಳು ಸಂಭವಿಸಿದಾಗ ಮೊದಲು ಮುನ್ನುಗ್ಗಿ ಬಂದು ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವ ಅಗ್ನಿಶಾಮಕ ಇಲಾಖೆಯ ಅಧಿಕಾರಿ/ಸಿಬ್ಬಂದಿಯವರಿಗೆ ಅವರ ಕಾರ್ಯವೈಕರಿ ಮತ್ತು ದಕ್ಷತೆಯನ್ನು ಗುರುತಿಸಿ ಸರಕಾರ ಚಿನ್ನದ ಪದಕವನ್ನು ನೀಡಿದೆ. ಈ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ ಇಬ್ಬರು ಚಿನ್ನದ ಪದಕ ವಿಜೇತರನ್ನು ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳು, ಅಧಿಕಾರಿ ವೃಂದ ಮತ್ತು ಸಹೋದ್ಯೋಗಿಗಳು, ಸಾರ್ವಜನಿಕರು ಅಭಿನಂದಿಸಿದ್ದಾರೆ.