ಹೊಸದಿಗಂತ ವರದಿ, ಕಲಬುರಗಿ:
ಚಿಕ್ಕಮಗಳೂರಿನ ವಕೀಲರ ಮೇಲೆ ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುಲಬರ್ಗಾ ನ್ಯಾಯವಾದಿಗಳ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾ ಕೋರ್ಟ್ ನಿಂದ ಕಾಲ್ನಡಿಗೆಯ ಮುಖಾಂತರ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತಕ್ಕೆ ಬಂದ ವಕೀಲರು, ಬೃಹತ್ ಮಾನವ ಸರಪಳಿ ನಿರ್ಮಿಸಿ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರತಿಭಟನೆ ನಡೆಸಿದರು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ, ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಆರಂಭದಿಂದ ಪೊಲೀಸ್ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಕೀಲರು, ಮುಖ್ಯವಾಗಿ ತೊಡೆ ತಟ್ಟುವ ಮೂಲಕ ಗಮನ ಸೆಳೆದರು. ಚಿಕ್ಕಮಗಳೂರಿನಲ್ಲಿ ನಡೆದ ಘಟನೆ ವೇಳೆ ಪೊಲೀಸ್ ಸಿಬ್ಬಂದಿ ತೊಡೆ ತಟ್ಟುವ ಮೂಲಕ ಇಡೀ ವಕೀಲ ಸಮುದಾಯಕ್ಕೆ ಅವಮಾನವಾಗಿದೆ ಎಂದು ಆರೋಪಿಸಿದರು. ಕೂಡಲೇ ತೊಡೆ ತಟ್ಟಿದ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಗುಪ್ತಲಿಂಗ ಪಾಟೀಲ್, ಹಿರಿಯ ವಕೀಲ ಎಂ.ಎನ್.ಪಾಟೀಲ್, ಧರ್ಮಣ್ಣ ಜೈನಾಪುರ ಜೈಶೀಲಾ, ಶಿವರಾಜ್ ಪಾಟೀಲ್, ಬಸವಲಿಂಗ ನಾಶಿ, ಎಸ್.ಕೆ.ಚಿಕ್ಕಾಲಿ ಸೇರಿದಂತೆ ನೂರಾರು ವಕೀಲರು ಇದ್ದರು.