ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಜಿಲ್ಲೆಯಲ್ಲಿ ರಕ್ತಸಿಕ್ತ ಅಧ್ಯಾಯ ಬರೆದಿದ್ದ ನಕ್ಸಲ್ ಚಳುವಳಿಯ ಕೊನೆಯ ಕೊಂಡಿ ಶೃಂಗೇರಿಯ ಕೋಟೆಹೊಂಡ ರವೀಂದ್ರ ಇಂದು ಜಿಲ್ಲಾಡಳಿತದೆದುರು ಶರಣಾಗತನಾಗಿದ್ದಾನೆ.
ಈ ಮೂಲಕ ಚಿಕ್ಕಮಗಳೂರು ಜಿಲ್ಲೆ ಸಧ್ಯಕ್ಕೆ ನಕ್ಸಲ್ ಮುಕ್ತ ಎನಿಸಿಕೊಂಡಿದೆ.
ನಕ್ಸಲ್ ಶರಣಾಗತಿ ಪ್ರಕ್ರಿಯೆಯ ನೋಡಲ್ ಅಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ಮತ್ತು ರಾಜ್ಯಮಟ್ಟದ ನಕ್ಸಲ್ ಶರಣಾಗತಿ ಸಮಿತಿಯ ಸದಸ್ಯ ಶ್ರೀಪಾಲ್ ಇತರರು ನಕ್ಸಲ್ ರವೀಂದ್ರನನ್ನು ಶೃಂಗೇರಿಯ ನೆಮ್ಮಾರಿನಿಂದ ಇಂದು ಬೆಳಗ್ಗೆ ಕರೆ ತಂದರು.
ಮಧ್ಯಾಹ್ನ 1 ಗಂಟೆ ಸುಮಾರಿಗೆ ನಗರಕ್ಕಾಗಮಿಸಿದ ಅವರನ್ನು ನೇರವಾಗಿ ಜಿಲ್ಲಾ ಪೊಲೀಸ್ ಕಚೇರಿಗೆ ಕರೆತಂದು ಎಸ್ಪಿ ಡಾ.ವಿಕ್ರಮ ಅಮಟೆ ಅವರ ಎದುರು ಹಾಜರುಪಡಿಸಲಾಯಿತು.ನಂತರ ಅವರಿಂದ ಪ್ರಸ್ತಾವನೆಯನ್ನು ಸ್ವೀಕರಿಸಿದ ಎಸ್ಪಿ ಅವರು ರವೀಂದ್ರ ಅವರಿಂದ ಹೇಳಿಕೆ ದಾಖಲಿಸಿಕೊಂಡು ನಂತರ ಅವರನ್ನು ನಕ್ಸಲ್ ಶರಣಾಗತಿ ಸಮಿತಿ ಜಿಲ್ಲಾ ಅಧ್ಯಕ್ಷರಾದ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜು ಅವರ ಎದುರು ಹಾಜರುಪಡಿಸಿ ಅವರಿಗೆ ಪ್ರಸ್ತವಾವನೆಯನ್ನು ಸಲ್ಲಿಸಲಾಯಿತು.
ನಂತರ ನಕ್ಸಲ್ ರವೀಂದ್ರನನ್ನು ಮಾದ್ಯಮದೆದುರು ಹಾಜರುಪಡಿಸಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಲಾಯಿತು.
ನನ್ನ ಮೇಲೆ ಯಾರದ್ದೂ ಒತ್ತಡ ಇರಲಿಲ್ಲ. ಸ್ವಯಿಚ್ಛೆಯಿಂದಲೇ ಶರಣಾಗತನಾಗುತ್ತಿದ್ದೇನೆ ಎಂದು ಶನಿವಾರ ಜಿಲ್ಲಾಡಳಿತದೆರು ಶರಣಾದ ನಕ್ಸಲ್ ಕೋಟೆಹೊಂಡ ಕೋಟೆಹೊಂಡ ತಿಳಿಸಿದರು.
ಇಷ್ಟು ದಿನ ಕಾಡಿನಲ್ಲೆ ಇದ್ದೆ. ನನ್ನ ಬಳಿ ಆಯುಧ ಇರಲಿಲ್ಲ ಎಂದು ತಿಳಿಸಿದ ಆತ, ಜಿಲ್ಲಾಡಳಿತದ ಎದುರು ಕೆಲವು ಬೇಡಿಕೆಗಳನ್ನು ಇರಿಸಿದ್ದೇನೆ ಈಡೇರಿಸುತ್ತದೆ ಎನ್ನುವ ಭರವಸೆ ಇದೆ ಎಂದು ತಿಳಿಸಿದರು.ನಮ್ಮ ಊರಲ್ಲಿ ಸರಿಯಾದ ರಸ್ತೆ ಇಲ್ಲ. ಹಕ್ಕು ಪತ್ರಗಳು ಇನ್ನೂ ಸಿಕ್ಕಿಲ್ಲ. ಅದನ್ನು ಕೊಡಿಸಿಕೊಡಬೇಕು. ಕಾಡುತ್ಪನ್ನಗಳನ್ನು ತೆಗೆಯಲು ಅನುಮತಿ ನೀಡಬೇಕು. ಭೂ ರಹಿತರು ತುಂಬಾ ಜನರಿದ್ದಾರೆ ಅವರಿಗೆ ಹಕ್ಕುಪತ್ರ ಕೊಡಿಸಿಕೊಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
14 ದಿನಗಳ ಕಾಲ ನ್ಯಾಯಾಂಗ ಬಂಧನ
ಕೆಲವೇ ನಿಮಿಷದಲ್ಲಿ ಅವರನ್ನು ಆರೋಗ್ಯ ತಪಾಸಣೆಗೆ ಕರೆದೊಯ್ಯಲಾಯಿತು. ಬಳಿಕ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯ ಜೆಎಂಎಫ್ ಸಿ ನ್ಯಾಯಾಲಯಕ್ಕೆ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಅವರು ರವೀಂದ್ರ ಅವರನ್ನು ಹಾಜರುಪಡಿಸಿದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಶರಣಾಗಿದ್ದಂತ ನಕ್ಸಲ್ ರವೀಂದ್ರ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನವನ್ನು ವಿಧಿಸಿ ಆದೇಶಿಸಿದೆ.
ಒಟ್ಟು 27 ಪ್ರಕರಣ
2007 ರಿಂದ ನಕ್ಸಲ್ ಚಟುವಟಿಕೆಯಲ್ಲಿ ಸಕ್ರೀಯನಾಗಿದ್ದ ರವೀಂದ್ರನ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯಲ್ಲಿ 13 ಪ್ರಕರಣಗಳು ಸೇರಿದಂತೆ ಕರ್ನಾಟಕ ರಾಜ್ಯದಲ್ಲಿ ಒಟ್ಟು 17 ಪ್ರಕರಣಗಳು ಹಾಗೂ ಹೊರ ರಾಜ್ಯಗಳಲ್ಲಿ 10 ಪ್ರಕರಣಗಳು ದಾಖಲಾಗಿವೆ ಎಂದು ಎಸ್ಪಿ ತಿಳಿಸಿದರು.