ಹೊಸದಿಗಂತ ವರದಿ, ತುಮಕೂರು:
ಹೆರಿಗೆಯ ನಂತರ ಬಾಣಂತಿ ಜೊತೆಗೆ ನವಶಾತ ಶಿಶುವನ್ನು ಊರಾಚೆ ಇರಿಸಿದ್ದ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿತ್ತು. ಈ ಮೌಢ್ಯದಿಂದಾಗಿ ಮಗು ಬಲಿಯಾಗಿದ್ದು, ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಣಂತಿಯು ಮನೆಯನ್ನು ಸೇರಿದ್ದು, ಮೌಢ್ಯಾಚರಣೆಗೆ ಬ್ರೇಕ್ ಬಿದ್ದಂತಾಗಿದೆ.
ತುಮಕೂರಿನ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಹಾಗೂ ಮಗುವನ್ನು ಊರಿನಿಂದ ಹೊರಗೆ ಜಮೀನಿನ ಗುಡಿಸಿಲಿನಲ್ಲಿ ಇಡಲಾಗಿತ್ತು. ಗೊಲ್ಲರ ಸಂಪ್ರದಾಯದಂತೆ ಒಂದು ತಿಂಗಳು ಬಾಣಂತಿ ಮತ್ತು ಮಗು ಊರಿನಿಂದ ಹೊರಗೆ ಇರಬೇಕಿತ್ತು. ಆದರೆ ನಿರಂತರ ಮಳೆಯಿಂದಾಗಿ ಮಗು ಅನಾರೋಗ್ಯಕ್ಕೆ ಒಳಪಟ್ಟಿತ್ತು. ಬಳಿಕ ಮಗುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಮಗುವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮೌಢ್ಯ ಆಚರಣೆಯಿಂದಾಗಿ ಮಗು ಸಾವನ್ನಪ್ಪಿದ ದುರಂತ ನಡೆದಿತ್ತು.
ಈ ದುರಂತದ ಬಳಿಕವೂ ಬಾಣಂತಿಯನ್ನು ಊರೊಳಗೆ ಸೇರಿಸಿಲ್ಲ. ಆದರೆ ಮನೆಯೊಳಗೆ ಸೇರಿಸಿಕೊಳ್ಳುವಂತೆ ಕುಟುಂಬಸ್ಥರು ಮತ್ತು ಗ್ರಾಮಸ್ಥರನ್ನು ಆರೋಗ್ಯ ಅಧಿಕಾರಿಗಳು ಮನವೊಲಿಸಲು ಯತ್ನಿಸಿದ್ದಾರೆ. ಆದರೂ ಕುಟುಂಬಸ್ಥರು ಅದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಸತತ ಪ್ರಯತ್ನದಿಂದ ಬಾಣಂತಿ ವಸಂತಾಳನ್ನು ಮನೆಯೊಳಗೆ ಸೇರಿಸುವಲ್ಲಿಆರೋಗ್ಯ ಇಲಾಖೆ ಯಶಸ್ವಿಯಾಗಿದೆ.
ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಬಾಣಂತಿಯನ್ನು ಶಾಸ್ತ್ರೋಕ್ತವಾಗಿ ಸಿದ್ದೇಶ್ ಕುಟುಂಬ ಮನೆಯೊಳಗೆ ಸೇರಿಸಿಕೊಂಡಿದೆ. ಕೊನೆಗೂ ಮನಸ್ಸು ಬದಲಿಸಿ, ಮೌಢ್ಯಾಚಾರಣೆಯನ್ನು ಬದಿಗೊತ್ತಿ ಬಾಣಂತಿಯನ್ನು ಕುಟುಂಬಸ್ಥರು ಮನೆ ಒಳಗೆ ಸೇರಿಸಿಕೊಂಡಿದ್ದಾರೆ.