ಹೊಸದಿಗಂತ ಡಿಜಿಟಲ್ ಡೆಸ್ಕ್:
ಅರ್ಧ ಸೇದಿ ಬಿಸಾಡಿದ್ದ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡಿದ್ದ ಹತ್ತು ತಿಂಗಳ ಮಗವೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಮಂಗಳೂರಿನ ಅಡ್ಯಾರ್ನಲ್ಲಿ ವಾಸವಾಗಿದ್ದ ಬಿಹಾರ ಮೂಲದ ದಂಪತಿಯ 10 ತಿಂಗಳ ಮಗು ಅನೀಶ್ ಕುಮಾರ್ ಮೃತ ಪಟ್ಟಿದೆ. ಶನಿವಾರ ಮಧ್ಯಾಹ್ನ ಸುಮಾರು 1:30ಕ್ಕೆ ಅರ್ಧ ಸೇದಿ ಬಿಸಾಡಿದ್ದ ಬೀಡಿ ತುಂಡನ್ನು ಮಗು ನುಂಗಿ ಅಸ್ವಸ್ಥಗೊಂಡಿತ್ತು.
ಮದ್ಯಾಹ್ನ 3:30ಕ್ಕೆ ಮಗುವನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಆದರೆ ಭಾನುವಾರ ಬೆಳಗ್ಗೆ 10:25ರ ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ.
ತನ್ನ ಗಂಡನ ನಿರ್ಲಕ್ಷ್ಯದಿಂದಲೇ ಬೀಡಿಯ ತುಂಡನ್ನು ನುಂಗಿ ಅಸ್ವಸ್ಥಗೊಂಡು ಮಗು ಮೃತಪಟ್ಟಿದೆ. ಮನೆಯೊಳಗೆ ಬೀಡಿ ಸೇದಿ ಬಿಸಾಡದಂತೆ ಗಂಡನಿಗೆ ಹಲವು ಬಾರಿ ಎಚ್ಚರಿಸಿದ್ದರೂ ಮತ್ತೆ ಎಸೆದ ಪರಿಣಾಮ ಮಗು ಪ್ರಾಣ ಕಳೆದುಕೊಂಡಿದೆ ಎಂದು ಮಗುವಿನ ತಾಯಿ ಲಕ್ಷ್ಮಿ ದೇವಿ ದೂರು ನೀಡಿದ್ದಾರೆ. ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.