ಹೊಸದಿಗಂತ ಡಿಜಿಟಲ್ ಡೆಸ್ಕ್
ಮುಸ್ಲಿಂ ಹುಡುಗಿಯರಿಗೆ ಅಪ್ರಾಪ್ತ ವಯಸ್ಸಿನಲ್ಲಿ ಮದುವೆಗೆ ಅನುಮತಿಸುವ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶ ಭಾರೀ ಚರ್ಚೆಗೆ ಈಡಾಗಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (NCPCR) ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ. ಈ ನಡುವೆ ದೇಶದಲ್ಲಿ ನಡೆಯುತ್ತಿರುವ ಬಾಲ್ಯವಿವಾಹ, ಹಾಗೂ ಹದಿಹರೆಯದ ಗರ್ಭದಾರಣೆ ಪ್ರಮಾಣವನ್ನು ಗಮನಿಸಿದರೆ ಮುಸ್ಲಿಂ ಸಮುದಾಯದಲ್ಲಿ ಅಘಾತಕಾರಿ ಪ್ರಮಾಣದಲ್ಲಿ ಹೆಚ್ಚಿರುವ ಅಂಶ ಕಂಡುಬಂದಿದೆ.
ದೇಶದಲ್ಲಿ ವೈಯಕ್ತಿಕ ಕಾನೂನುಗಳನ್ನು ಪರಿಗಣಿಸಿ ಕೆಲವು ಸಮುದಾಯಗಳಲ್ಲಿ ಅಪ್ರಾಪ್ತ ವಯಸ್ಸಿನ ವಿವಾಹಗಳಿಗೆ ಮಾನ್ಯತೆಯಿದೆ. ಇವೆಲ್ಲವುಗಳ ನಡುವೆ ದೇಶದಲ್ಲಿ ಬಾಲ್ಯ ವಿವಾಹದ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ- (NFHS 2019-21) ಪ್ರಕಾರ, ಈಗ 20-24 ವಯಸ್ಸಿನ ಆಸುಪಾಸಿನಲ್ಲಿರುವ 23.3 ಪ್ರತಿಶತ ಮಹಿಳೆಯರು ತಮ್ಮ 18 ವರ್ಷದ ವಯಸ್ಸನ್ನು ತಲುಪುವ ಮುನ್ನವೇ ವಿವಾಹವಾದವರಾಗಿದ್ದಾರೆ. ಭಾರತದಲ್ಲಿ ಬಾಲ್ಯವಿವಾಹ ಪ್ರಕರಣಗಳು ಕೇವಲ ಐದು ವರ್ಷಗಳಲ್ಲಿ ಶೇಕಡಾ 222 ರಷ್ಟು ಏರಿಕೆಯಾಗಿದೆ ಎಂದು NCRB ಅಂಕಿಅಂಶಗಳು ತೋರಿಸುತ್ತವೆ. 2016ರಲ್ಲಿ ಇಂತಹ 326 ಪ್ರಕರಣಗಳು ಕಂಡುಬಂದರೆ, 2021ರಲ್ಲಿ ಈ ಸಂಖ್ಯೆ 1,050ಕ್ಕೆ ಏರಿದೆ. ಅಲ್ಲದೆ, ವರದಿಯ ಪ್ರಕಾರ, ಕನಿಷ್ಠ 34 ಅಪ್ರಾಪ್ತ ಬಾಲಕಿಯರನ್ನು ಮದುವೆಗೆ ಒತ್ತಾಯಿಸಲು ಪ್ರತಿದಿನ ಅಪಹರಿಸಲಾಗುತ್ತಿದೆ.
ಈ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 15 ರಿಂದ 19 ವರ್ಷ ವಯಸ್ಸಿನ 7 ಪ್ರತಿಶತದಷ್ಟು ಮಹಿಳೆಯರು ಮಗುವನ್ನು ಹೊಂದುತ್ತಿದ್ದಾರೆ. ಇದರ ಅನುಪಾತವು ಮುಸ್ಲಿಮರಲ್ಲಿ ಅತಿ ಹೆಚ್ಚು. ಆ ಸಮುದಾಯ 8.4 ಪ್ರತಿಶತ ಸ್ತ್ರೀಯರು ಹದಿಹರೆಯದಲ್ಲೇ ಮಗುವಿಗೆ ಜನ್ಮ ನೀಡುತ್ತಿದ್ದಾರೆ. ಈ ಪ್ರಮಾಣ ಕ್ರಿಶ್ಚಿಯನ್ನರನ್ನಲ್ಲಿ ಶೇಕಡಾ 6.8 ಮತ್ತು ಹಿಂದೂಗಳಲ್ಲಿ ಶೇ. 6.5 ಮಾತ್ರವೇ ಆಗಿದೆ. ಅಂದರೆ, ಮುಸ್ಲಿಮರಲ್ಲಿ ಹದಿಹರೆಯದ ಗರ್ಭಧಾರಣೆಯು ಹಿಂದೂಗಳಿಗಿಂತ 30 ಶೇಕಡಾ ಹೆಚ್ಚಾಗಿದೆ. ಮುಸ್ಲಿಮರಲ್ಲಿ ಗರ್ಭನಿರೋಧಕಗಳ ಬಳಕೆಯು ತುಂಬಾ ಕಡಿಮೆಯಿದೆ ಎಂದು ಡೇಟಾ ತೋರಿಸುತ್ತದೆ.
ಇನ್ನೊಂದು ವೈಚಿತ್ರ್ಯವೆಂದರೆ ಹಿಂದೂಗಳಿಗೆ ಬಾಲ್ಯವಿವಾಹಕ್ಕೆ ದಂಡ ವಿಧಿಸಬಹುದು, ಶಿಕ್ಷೆಯನ್ನೂ ನೀಡಬಹುದು. ಆದರೆ, ಮುಸ್ಲಿಮರು ವೈಯಕ್ತಿಕ ಕಾನೂನುಗಳನ್ನು ಅನುಸರಿಸುವುದರಿಂದ ಅದು ಅವರಿಗೆ ಯಾವ ಶಿಕ್ಷೆಯೂ ಅನ್ವಯಿಸುವುದಿಲ್ಲ. ಆದ್ದರಿಂದ ಪೋಸ್ಕೋ ( ದೌರ್ಜನ್ಯದಿಂದ ಮಕ್ಕಳ ರಕ್ಷಣೆ) ಪ್ರಕರಣಗಳಲ್ಲಿ ಮುಸ್ಲಿಮರಿಗೆ ಅತಿ ಕಡಿಮೆ ಪ್ರಮಾಣದಲ್ಲಿ ಶಿಕ್ಷೆಯಾಗುತ್ತಿದೆ. ಈ ಮಾಹಿತಿಯ ಪ್ರಕಾರ, ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಫಲವಂತಿಕೆ ಪ್ರಮಾಣಕ್ಕೆ ಹೋಲಿಸಿದರೆ (1.9), ಮುಸ್ಲಿಮರ ಫಲವಂತಿಕೆ ಪ್ರಮಾಣ (2.4) ಬಾರೀ ಪ್ರಮಾಣದಲ್ಲಿ ಹೆಚ್ಚಿರುವುದು ತಿಳಿದುಬರುತ್ತದೆ.
ಈಗಾಗಲೇ ಜನಸಂಖ್ಯೆಯ ಸ್ಫೋಟದಿಂದ ಬಳಲುತ್ತಿರುವ ದೇಶಕ್ಕೆ ಅಪ್ರಾಪ್ತ ವಯಸ್ಕರ ವಿವಾಹಗಳು ದೊಡ್ಡ ಕಂಟಕವಾಗಿ ಪರಿಣಮಿಸಿದೆ. ಹದಿಹರೆಯದ ಗರ್ಭಧಾರಣೆಯು ಗ್ರಾಮೀಣ ಪ್ರದೇಶಗಳಲ್ಲಿ ಅತಿಹೆಚ್ಚಾಗಿದೆ. 15-19 ವಯಸ್ಸಿನ ಸುಮಾರು 53 ಪ್ರತಿಶತ ವಿವಾಹಿತ ಮಹಿಳೆಯರು ಈಗಾಗಲೇ ಮಗುವನ್ನು ಹೊಂದಲು ಪ್ರಾರಂಭಿಸಿದ್ದಾರೆ. ತ್ರಿಪುರಾ (22%), ಪಶ್ಚಿಮ ಬಂಗಾಳ (16%), ಆಂಧ್ರ ಪ್ರದೇಶ (13%), ಅಸ್ಸಾಂ (12%), ಬಿಹಾರ (11%) ಮತ್ತು ಜಾರ್ಖಂಡ್ (10%) ಹದಿಹರೆಯದ ಗರ್ಭಧಾರಣೆಯ ಹೆಚ್ಚಿನ ಮಟ್ಟವನ್ನು ಹೊಂದಿವೆ.
2016 ಮತ್ತು 2021 ರ ನಡುವೆ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಕರ್ನಾಟಕದಲ್ಲಿ (757) ವರದಿಯಾಗಿದೆ. ಅಸ್ಸಾಂ (577), ತಮಿಳುನಾಡು (469) ಮತ್ತು ಪಶ್ಚಿಮ ಬಂಗಾಳ (431) ನಂತರದ ಸ್ಥಾನದಲ್ಲಿವೆ.
ಈ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರವು ಮಹಿಳೆಯರ ಕಾನೂನುಬದ್ಧ ವಿವಾಹದ ವಯಸ್ಸನ್ನು 18 ರಿಂದ 21 ಕ್ಕೆ ಏರಿಸಲು ಪ್ರಸ್ತಾಪಿಸಿದೆ. ಅಂತಹ ಕ್ರಮವು ಕನಿಷ್ಠಪಕ್ಷ ಮಹಿಳೆಯರನ್ನು ಮತ್ತಷ್ಟು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿರಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ