ಹೊಸದಿಗಂತ ವರದಿ, ವಿಜಯಪುರ:
ಇಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಮಗು ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದ್ದು, 24 ಗಂಟೆಯಲ್ಲಿ ಹಸುಗೂಸು ತಾಯಿ ಮಡಿಲಿಗೆ ಮರಳಿ ಸೇರಿದೆ.
ನಗರದ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಯೊಬ್ಬಳು ತನ್ನ ತಾಯಿಯನ್ನು ಚಿಕಿತ್ಸೆಗೆ ದಾಖಲಿಸಿ, ಇಬ್ಬರು ಮಕ್ಕಳೊಂದಿಗೆ ಆಸ್ಪತ್ರೆಯಲ್ಲಿ ಇರುವ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಹಾಡಹಗಲೇ ಒಂದು ವರ್ಷದ ಸಂದೀಪ ಎಂಬ ಮಗುವನ್ನು ಕದ್ದುಕೊಂಡು ಹೋಗಿದ್ದ.
ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ನಿವಾಸಿ ರಾಮೇಶ್ವರಿ ತನ್ನ ಇಬ್ಬರು ಮಕ್ಕಳೊಂದಿಗೆ, ತಾಯಿ ಪದ್ಮಾ ಪವಾರ್ ಜೊತೆಗೆ ವಿಜಯಪುರಕ್ಕೆ ಸಂಬಂಧಿಕರ ಮನೆಗೆ ಬಂದಿದ್ದಾರೆ. ಈ ವೇಳೆ ತಾಯಿ ಪದ್ಮಾ ಪವಾರ್ ಆರೋಗ್ಯ ಕೆಟ್ಟಿದೆ. ಹೀಗಾಗಿ ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ನ. 23 ರ ಬೆಳಗ್ಗೆ 12 ಗಂಟೆಗೆ ರಾಮೇಶ್ವರಿ, ತಾಯಿ ಪದ್ಮಾಳ ಕಫದ ಪರೀಕ್ಷೆಗಾಗಿ ಒಂದು ವರ್ಷದ ಮಗು ಸಂದೀಪ್‌ನನ್ನು ತಾಯಿ ಬಳಿ ಬಿಟ್ಟು ಹೋಗಿದ್ದಳು. ಈ ವೇಳೆ ಸಂದೀಪ ಎದ್ದು ಅಳಲು ಶುರು ಮಾಡಿದಾಗ, ಮತ್ತೋರ್ವ ಪರಿಚಿತ 10 ವರ್ಷದ ಬಾಲಕ ಸಂದೀಪನನ್ನು ಎತ್ತಿಕೊಂಡು ಆಟವಾಡಿಸಿದ್ದಾನೆ. ಇದನ್ನೇ ಗಮನಿಸಿದ ಅಪರಿಚಿತ ವ್ಯಕ್ತಿ ವಾರ್ಡ್ನೊಳಗೆ ಬಂದು ಮಗು ಎತ್ತಾಡಿಸಿದ್ದಾನೆ. ಆ ಬಳಿಕ ಬಾಲಕ ಮಗುವನ್ನು ಹೊರಗೆ ತೆಗೆದುಕೊಂಡು ಹೋದಾಗ, ಅಪರಿಚಿತ ವ್ಯಕ್ತಿ ಮಗುವನ್ನು ಕದ್ದುಕೊಂಡು ಹೋಗಿದ್ದ. ಈ ವಿಚಾರವಾಗಿ ಗಾಂಧಿ ಚೌಕ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಳು.
ಇನ್ನು ಮಗು ಕದ್ದೊಯ್ಯುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಿಸಿ ಕ್ಯಾಮೆರಾ ಆಧರಸಿ ಪೋಲಿಸರು ಕಳ್ಳನ ಪತ್ತೆಗೆ ಬಲೆ ಬೀಸಿದ್ದರು.
ಭಾನುವಾರ ಮಧ್ಯಾಹ್ನ 1.30 ರ ಸುಮಾರಿಗೆ ಮಗುನೊಂದಿಗೆ ಅನಾಮಿಕ ವ್ಯಕ್ತಿ ದಿಢೀರನೆ ಬಂದು ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯಕ್ಷನಾಗಿದ್ದಾನೆ. ವಾರ್ಡ್ ನಂಬರ್ 123 ರಲ್ಲಿ ಶನಿವಾರ ಬೆಳಗ್ಗೆ 12 ರ ಸುಮಾರಿಗೆ ಮಗುವನ್ನು ಎತ್ತೊಯ್ದಿದ್ದ ಅಪರಿಚಿತ ವ್ಯಕ್ತಿ ಮಗುವನ್ನು ತಂದು ಆಸ್ಪತ್ರೆಯ ಮುಂಭಾಗ ನಿಂತಿದ್ದ, ತಕ್ಷಣವೇ ಆತನನ್ನು ವಶಕ್ಕೆ ಪಡೆದ ಪೋಲಿಸರು ಮಗುವನ್ನು ತಾಯಿಯ ಮಡಿಲಿಗೆ ನೀಡಿದ್ದಾರೆ. ಆಗ ಕಳೆದುಕೊಂಡ ಮಗು ಸಿಕ್ಕ ಖುಷಿಯಲ್ಲಿ ತಾಯಿ ರಾಮೇಶ್ವರಿ ಕಣ್ಣೀರು ಸುರಿಸಿದ್ದಾಳೆ.
ಅಲ್ಲದೆ ಸ್ಥಳದಲ್ಲೇ ಇದ್ದ ಪೊಲೀಸರು ಮಗುವನ್ನು ತೆಗದುಕೊಂಡು ಹೋಗಿದ್ದವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಆ ವ್ಯಕ್ತಿ ಜಿಲ್ಲೆ ದೇವರಹಿಪ್ಪರಗಿ ತಾಲೂಕಿನ ಚಟ್ನಳ್ಳಿ ಗ್ರಾಮದ ರವಿ ಹರಿಜನ ಎಂದು ತಿಳಿದು ಬಂದಿದೆ.
ಮಗುವನ್ನು ಆಟವಾಡಿಸಲು ಎತ್ತುಕೊಂಡಿದ್ದ, ವೇಳೆ ಕರೆ ಬಂದ ಹಿನ್ನೆಲೆ ಮಾತನಾಡುತ್ತ ಹಾಗೇ ಮಗುವನ್ನು ಕರೆದುಕೊಂಡು ಹೋದೆ ಎಂದು ಹೇಳುತ್ತಿದ್ದಾನೆ. ಸದ್ಯ ರವಿ ಹರಿಜನನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ತಿಳಿಸಿದ್ದಾರೆ.