ಬಾಲ್ಯದ ಕನಸು ನನಸಿಗೆ ಪತಿಯ ಸಾಥ್: ಧೋನಿ ಆಟ ನೋಡಲು ಲಂಡನ್‍ನಿಂದ ಬಂದ ನವ್ಯಾ ಭಟ್!

* ಐ.ಬಿ. ಸಂದೀಪ್ ಕುಮಾರ್

ಪುತ್ತೂರು:

ಐಪಿಎಲ್‍ನಲ್ಲಿ ಅತ್ಯಂತ ಹಿರಿಯ ಆಟಗಾರನೆಂಬ ಶ್ರೇಯಸ್ಸಿಗೆ ಭಾಜನರಾದವರು ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ. ತನ್ನ 42ನೇ ವಯಸ್ಸಿನಲ್ಲೂ ಧೋನಿ ಅವರ ಆಟದ ಶೈಲಿ ಮೆಚ್ಚದವರಿಲ್ಲ. ಧೋನಿ ಪ್ರಸಕ್ತ ಐಪಿಎಲ್ ಆವೃತಿಗಳನ್ನು ಆಡಿದ ಬಳಿಕ ನಿವೃತ್ತರಾಗುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದು ಧೋನಿ ಅಭಿಮಾನಿ ಬಳಗದಲ್ಲಿ ನಿರಾಸೆಯನ್ನು ಮೂಡಿಸಿರುವುದು ಸುಳ್ಳಲ್ಲ. ಜೀವನದಲ್ಲಿ ಒಮ್ಮೆಯಾದರೂ ಧೋನಿಯ ಕ್ರಿಕೆಟ್ ಆಟವನ್ನು ಕಣ್ಣಾರೆ ನೋಡಬೇಕೆಂಬ ಬಯಕೆಯನ್ನು ಇಟ್ಟುಕೊಂಡ ಅದೆಷ್ಟೋ ಅಭಿಮಾನಿಗಳಿದ್ದಾರೆ. ಅಂತಹವರಲ್ಲಿ ಮೂಡಬಿದಿರೆಯ ನವ್ಯಾ ಭಟ್ ಒಬ್ಬರು. ಪತ್ನಿಯ ಬಾಲ್ಯದ ಕನಸನ್ನು ನನಸು ಮಾಡಬೇಕೆಂದು ಪಣ ತೊಟ್ಟ ಪತಿ ಕೊನೆಗೂ ಧೋನಿಯ ಪಂದ್ಯಾಟವನ್ನು ವೀಕ್ಷಿಸುವ ಅವಕಾಶವನ್ನು ಒದಗಿಸಿಕೊಟ್ಟ ಅಪರೂಪದ ವಿದ್ಯಮಾನವಿದು.

ಎಂ.ಎ. ಚಿದಂಬರಂ ಸ್ಟೇಡಿಯಂ ಚೆಪಾಕ್ ಸ್ಟೇಡಿಯಂ ಎಂದೇ ಪ್ರಸಿದ್ಧಿ ಗಳಿಸಿರುವ ಕ್ರೀಡಾಂಗಣದಲ್ಲಿ ಮೇ 12 ರಂದು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‍ಕೆ) ತಂಡ ಮುಖಾಮುಖಿಯಾಗಿತ್ತು. ಈಗಾಗಲೇ ಸಿಎಸ್‍ಕೆ ತಂಡದ ನಾಯಕತ್ವ ತ್ಯಜಿಸಿರುವ ಧೋನಿ ಈ ಋತುವಿನ ನಂತರ ಕ್ರಿಕೆಟ್‍ಗೆ ವಿದಾಯ ಹೇಳಬಹುದು ಎಂದು ಭಾವಿಸಲಾಗಿದೆ. ಪ್ರಸಕ್ತ ಋತುವಿನ ಪಂದ್ಯಗಳ ಡೆತ್ ಓವರ್‍ಗಳಲ್ಲಿ ಬ್ಯಾಂಟಿಂಗ್‍ಗೆ ಇಳಿಯುವ ಧೋನಿ 10 ಇನ್ನಿಂಗ್ಸ್‍ಗಳಲ್ಲಿ 226.66 ಸ್ಟ್ರೈಕ್ ರೇಟ್‍ನೊಂದಿಗೆ 136 ರನ್‍ಗಳನ್ನು ಗಳಿಸಿದ್ದಾರೆ. ಈ ಪಂದ್ಯಾಟದಲ್ಲಿ ಅವರ ಸಾಧನೆಯನ್ನು ಹೇಗಾದರೂ ನೋಡಲೇಬೆಕು ಎಂದು ಕನಸು ಕಂಡವರು ನವ್ಯಾ ಭಟ್.

ನಿಶಾಂತ್-ನವ್ಯಾ ಬೇರೆ ಬೇರೆ ಕಂಪೆನಿಗಳಲ್ಲಿ ಉದ್ಯೋಗಿಗಳಾಗಿದ್ದ ಕಾರಣ ಇಬ್ಬರಿಗೂ ಒಂದೇ ಬಾರಿಗೆ ರಜೆ ಲಭಿಸುವುದು ಕಷ್ಟಕರವಾಗಿತ್ತು. ಕಂಪೆನಿಯ ಮೇಲಧಿಕಾರಿಗಳ ಮನವೊಲಿಸಿ ರಜೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಮೇ 11ರಂದು ಲಂಡನ್‍ನಿಂದ ಮಂಗಳೂರಿಗೆ ಬಂದಿಳಿದಿದ್ದ ದಂಪತಿ ಅದೇ ದಿನ ಮತ್ತೆ ಚೆನ್ನೈಗೆ ಪ್ರಯಾಣ ಬೆಳೆಸಿದ್ದರು. ಅಂದರೆ ಮೇ 12ರಂದು ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ಮಧ್ಯೆ ಪಂದ್ಯಾಟ ನಡೆಯಲಿತ್ತು. ಈ ಪಂದ್ಯಾಟದ ಟಿಕೇಟ್‍ಗಳನ್ನು ಕಷ್ಟಪಟ್ಟು ಕಾದಿರಿಸಿದ್ದರಿಂದ ಅಂದು ಧೋನಿಯ ಆಟವನ್ನು ವೀಕ್ಷಿಸುವ ಅದೃಷ್ಟ ನವ್ಯಾ ಭಟ್ ಅವರಿಗೆ ದೊರಕಿತ್ತು.

ಮೇ 12 ರಂದು ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಸಿಎಸ್‍ಕೆ 5 ವಿಕೆಟ್‍ಗಳ ಜಯ ಸಾಧಿಸಿತ್ತು. ರವೀಂದ್ರ ಜಡೇಜ ಔಟ್ ಆದ ಬಳಿಕ ಎಂ.ಎಸ್. ಧೋನಿ ಕ್ರೀಸ್‍ಗೆ ಇಳಿಯಬೇಕಾಗಿತ್ತು. ಆದರೆ, ಧೋನಿ ಬ್ಯಾಟಿಂಗ್‍ಗೆ ಬಾರದೆ ಸಮೀರ್ ರಿಝ್ವಿ ಆರ್. ಗಾಯಕ್ವಾಡ್‍ಗೆ ಜತೆಯಾದರು. ಇದರಿಂದ ನವ್ಯಾ ನಿರಾಶೆ ಅನುಭವಿಸುವಂತಾಗಿತ್ತು.  ಆದರೆ, ಸಿಎಸ್‍ಕೆ ಫ್ರಾಂಚೈಸಿ ವಿಶೇಷ ಪದಕದೊಂದಿಗೆ ಧೋನಿಯನ್ನು ಗೌರವಿಸಿರುವುದನ್ನು ನೋಡುವ ಭಾಗ್ಯ ಅವರಿಗೆ ದೊರಕಿತ್ತು.

ಪುತ್ತೂರು ಬೊಳುವಾರಿನ ನಿಶಾಂತ್ ಶೆಣೈ ಮತ್ತು ಅವರ ಪತ್ನಿ ನವ್ಯಾ ಭಟ್ ಮೂಡುಬಿದಿರೆಯವರು. ಅವರಿಬ್ಬರೂ ಪ್ರಸ್ತುತ ಯುನೈಟೆಡ್ ಕಿಂಗ್‍ಡಂನ ಲಂಡನ್‍ನಲ್ಲಿ ಉದ್ಯೋಗ ನಿಮಿತ್ತ ವಾಸ್ತವ್ಯವಿದ್ದಾರೆ. ನಿಶಾಂತ್ ಆ್ಯಪಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರೆ ನವ್ಯಾ ಟಿಸಿಎಲ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!