ಸುರೇಶ್ ಡಿ. ಪಳ್ಳಿ
ಮಂಗಳೂರು: ಅಬ್ಬಾ! ಎಂತಾ ಬಿಸಿಲು. ಇದು ಪ್ರಸ್ತುತ ಕರಾವಳಿ ಜನತೆಯಾಡುವ ನಿತ್ಯದ ಮಾತು. ಆದರೆ, ಈ ಕಂದಮ್ಮಗಳಿಗೆ ಅದರ ಪರಿವೇ ಇಲ್ಲ. ಬಿರುಬಿಸಿಲಿನಲ್ಲಿಯೇ ಇವು ನಿತ್ಯ ಕಮರುತ್ತಿವೆ.
ಅತ್ತೂ ಅತ್ತು ಕಣ್ಣಂಚಿನಲ್ಲಿ ಮಡುಗಟ್ಟಿ ನಿಂತ ಕಣ್ಣೀರಹನಿ ಅವುಗಳ ಅಸಾಯಕತೆಯನ್ನು ಸಾರಿ ಹೇಳುತ್ತವೆ. ಪಾಪ ‘ಹೀಟ್ ವೇವ್’ ಇದೆ ಎಂಬುದು ಈ ಎಳೆ ಜೀವಗಳಿಗೇನು ಗೊತ್ತು?
ಕೆಲವು ನಿದ್ದೆಯ ಮಂಪರಿನಲ್ಲಿದ್ದರೆ, ಇನ್ನು ಕೆಲವು ಭಿಕ್ಷಾಟಣೆಗಿಳಿದವರ ಜೋಳಿಗೆಯಲ್ಲಿ ಸುಸ್ತಾಗಿ ಬಿದ್ದುಕೊಂಡಿರುತ್ತವೆ. ನಿಜವಾಗಿಯೂ ಅವರು ಅಮ್ಮಂದಿರೆ? ಬಾಲಕಿಯರ ಕೈಯಲ್ಲೂ ಹಸುಗೂಸುಗಳಿವೆ ಎಂದರೆ ಇದೊಂದು ಭಿಕ್ಷಾಟಣೆಗೆಂದು ಮಕ್ಕಳನ್ನು ಬಳಸುವ ದಂಧೆಯಲ್ಲವೇ? ಏನೂ ತಪ್ಪು ಮಾಡದ, ಇಹಲೋಕದ ಪರಿವೇ ಇಲ್ಲದ ಈ ಪುಟ್ಟ ಹಸುಳೆಗಳಿಗ್ಯಾಕೆ ಶಿಕ್ಷೆ?
ಕೆಲವು ತಾಯಂದಿರು, ಕೆಲವರು ಬಾಲಕಿಯರು ಹೆಗಲಲ್ಲೊಂದು ಜೋಳಿಗೆ ಸಿಕ್ಕಿಸಿ ಕಂಕುಳಲ್ಲಿ ಮಗುವೊಂದನ್ನು ಹಿಡಿದುಕೊಂಡು ದಿನಬೆಳಗಾದರೆ ನಗರದ ಆಯಕಟ್ಟಿನ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಬೆಳಗ್ಗಿನಿಂದ ಸಂಜೆಯವರೆಗೂ ಮಕ್ಕಳನ್ನಿಡಿದುಕೊಂಡು ಭಿಕ್ಷೆ ಬೇಡುವುದೇ ಇವರ ನಿತ್ಯದ ಕಾಯಕ. ಮಂಗಳೂರು ನಗರದಲ್ಲಂತೂ ಕೇಳುವುದೇ ಬೇಡ. ಪ್ರತಿ ಸಿಗ್ನಲ್‌ನಲ್ಲಿ ಮಕ್ಕಳನ್ನು ಹಿಡಿದುಕೊಂಡು ಅಮ್ಮಾ ತಾಯಿ… ಎಂದು ಭಿಕ್ಷೆ ಬೇಡುವುದು ನಿರಂತರ ಮುಂದುವರಿದಿದೆ. ಬಿಸಿಲ ಬೇಗೆಯಿಂದ ತತ್ತರಿಸುವ ಆ ಕಂದಮ್ಮಗಳ ಗೋಳು ಹೇಳತೀರದು.
ಇಲಾಖೆ ಮೌನವೇಕೆ?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿ ಇರುವ ಕೂಗಳತೆ ದೂರದಲ್ಲಿಯೇ ಇಂತಹ ಭಿಕ್ಷಾಟನೆ ದಂಧೆ ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಏಸಿ ರೂಂನಿಂದ ಹೊರಬರುತ್ತಿಲ್ಲ.
ಇಲಾಖೆಯನ್ನೇ ಅಣಕಿಸುವಂತೆ ಇಲಾಖೆಯ ಸುತ್ತಮುತ್ತಲೇ ಇಂತಹ ಭಿಕ್ಷಾಟಣೆ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಮಾನವೀಯತೆಯ ಬಗ್ಗೆ ಮಾತಾಡುವವರು, ಭಾಷಣ ಮಾಡುವವರು ಈ ಮಕ್ಕಳ ಮುಂದೆಯೇ ಸಾಗಿ ಹೋಗುತ್ತಾರೆ. ಆದರೂ ಈ ಮಕ್ಕಳ ಗೋಳು ಯಾರ ಮನಸ್ಸನ್ನೂ ಕಲಕದು. ಹಾಗಾದರೆ ಭಾಷಣ, ಮಾತುಗಳಿಗಷ್ಟೇ ಮಾನವೀಯತೆ ಸೀಮಿತವಾಯಿತೇ? ಜಿಲ್ಲಾಡಳಿತಕ್ಕೆ ಹೊಣೆಗಾರಿಕೆ ಇಲ್ಲವೇ?
ಮಕ್ಕಳ ಗೋಳು ಕೇಳೋರಿಲ್ಲ
ಸ್ಮಾರ್ಟ್ ಸಿಟಿಯಾಗಿ ಬದಲಾಗುತ್ತಿರುವ ಮಂಗಳೂರಿಗೆ ಮಕ್ಕಳ ಭಿಕ್ಷಾಟಣೆ ದಂಧೆ, ಟ್ರಾಫಿಕ್ ಸಿಗ್ನಲ್‌ನಲ್ಲಿ ಕಾಡುವ ಮಂಗಳಮುಖಿಯರ ಉಪಟಳ ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿದೆ. ನಗರಕ್ಕೆ ಆಗಮಿಸುವ ಪ್ರವಾಸಿಗರು ನಿತ್ಯ ಇರಿಸುಮುರಿಸಿಗೆ ಒಳಗಾಗುವುದನ್ನು ಜಿಲ್ಲಾಡಳಿತ ಗಮನಿಸಬೇಕಿದೆ.
ಮಕ್ಕಳು, ಮಹಿಳೆಯರು, ಗರ್ಭಿಣಿಯರು, ಪುಟ್ಟ ಕಂದಮ್ಮಗಳನ್ನು ಹಿಡಿದುಕೊಂಡ ಯುವತಿಯರು ಭಿಕ್ಷಾಟಣೆಗಿಳಿದುಬಿಟ್ಟಿರುವುದು ನಗರದಲ್ಲಿ ಕಣ್ಣಿಗೆ ರಾಚುತ್ತದೆ. ಅವರ ಸ್ಥಿತಿ ನೋಡಿ ಕನಿಕರ ಉಂಟಾದರೂ ಈ ಬೆಳವಣಿಗೆ ಅಷ್ಟೇ ಅಪಾಯಕಾರಿಯೂ ಹೌದು. ಹಸುಗೂಸನ್ನು ಮುಂದಿಟ್ಟುಕೊಂಡೇ ಇಮೋಶನಲ್ ಬ್ಲ್ಯಾಕ್‌ಮೇಲ್ ಮಾಡುವ ಮಂದಿ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಮಂಗಳೂರು ಸದಾ ಟ್ರಾಫಿಕ್‌ನಿಂದ ಕೂಡಿತ್ತದೆ. ಇಂತಹ ಜನನಿಬಿಡ ಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳುವ ಮಂದಿ ವಾಹನ ಸವಾರರನ್ನು ಇನ್ನಿಲ್ಲದೆ ಕಾಡುತ್ತಾರೆ. ಇದರಿಂದ ಅಪಘಾತಗಳಿಗೂ ಎಡೆಮಾಡಿಕೊಟ್ಟಾಂತಾಗಿದೆ.