ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರಲ್ಲಿ ಹಜ್ ಯಾತ್ರೆಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿದೆ. ಇದರಲ್ಲಿ ಪ್ರಮುಖವಾದ್ದು ಹಜ್ ಯಾತ್ರೆಯಲ್ಲಿ ಮಕ್ಕಳನ್ನು ನಿಷೇಧಿಸಲಾಗಿದೆ.
ಹೌದು, ಈ ಬಾರಿ ಹಜ್ ಯಾತ್ರೆಗೆ ಮಕ್ಕಳನ್ನು ನಿಷೇಧಿಸಲಾಗಿದೆ ಎಂದು ಅಲ್ಲಿನ ಸರ್ಕಾರ ಘೋಷಿಸಿದೆ. ಅಲ್ಲದೇ ವೀಸಾಗೆ ಸಂಬಂಧಿಸಿದಂತೆ ಹಲವು ಮಹತ್ವದ ಕ್ರಮಗಳನ್ನು ಕೂಡ ಸೌದಿ ಅರೇಬಿಯಾ ಸರ್ಕಾರ ಕೈಗೊಂಡಿದೆ. ಈ ಬಾರಿ ಹಜ್ ಯಾತ್ರೆಗೆ ಮಕ್ಕಳ ಮೇಲೆ ನಿಷೇಧವೇಕೆ? ವೀಸಾಗೆ ಸಂಬಂಧಿಸಿದಂತೆ ಸೌದಿ ಅರೇಬಿಯಾ ತೆಗೆದುಕೊಂಡಿರುವ ಕ್ರಮಗಳೇನು ಎಂಬುದರ ಕುರಿತು ಇಲ್ಲಿ ವಿವರಿಸಲಾಗಿದೆ.
2025ರ ಜೂನ್‌ನಲ್ಲಿ ಪ್ರಾರಂಭವಾಗುವ ಹಜ್ ಯಾತ್ರೆಗೆ ನೋಂದಣಿ ಆರಂಭವಾಗಿದೆ. ಈ ಬೆನ್ನಲ್ಲೇ ಸೌದಿ ಅರೇಬಿಯಾ ಸರ್ಕಾರ ಈ ಬಾರಿ ಮಕ್ಕಳನ್ನು ಹಜ್ ಯಾತ್ರೆಗೆ ಅನುಮತಿಸುವುದಿಲ್ಲ ಎಂದು ಹೇಳಿದೆ. ಈ ವಾರ್ಷಿಕ ಯಾತ್ರೆಯ ಸಂದರ್ಭದಲ್ಲಿ ಜನಸಂಖ್ಯೆ ಹೆಚ್ಚಾಗುವ ಹಿನ್ನೆಲೆ ಮಕ್ಕಳ ಆರೋಗ್ಯ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.
ಮಕ್ಕಳನ್ನು ಜನದಟ್ಟಣೆಯ ಅಪಾಯದಿಂದ ರಕ್ಷಿಸಲು ಹಾಗೂ ಯಾತ್ರೆಯ ಅನುಭವವನ್ನು ಮತ್ತಷ್ಟು ಸೀಮಾತೀತಗೊಳಿಸಲು ಹಜ್ ಯಾತ್ರೆಗೆ ಮಕ್ಕಳನ್ನು ನಿಷೇಧಿಸಲಾಗಿದೆ. ಅಪಾಯಕಾರಿ ಸನ್ನಿವೇಶಗಳಲ್ಲಿ ಭಾರಿ ಜನಜಂಗುಳಿಯನ್ನು ನಿಯಂತ್ರಿಸಬೇಕಾಗುವುದರಿಂದ ಹಜ್ ಸಂದರ್ಭದಲ್ಲಿ ಸಣ್ಣ ಮಕ್ಕಳು ಗಂಭೀರ ಅಪಾಯಕ್ಕೊಳಗಾಗುವ ಸಾಧ್ಯತೆ ಇದೆ ಎಂದು ಸಚಿವಾಲಯ ಒತ್ತಿ ಹೇಳಿದೆ.