ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣದಡಿ ಸೆರೆವಾಸ ಅನುಭವಿಸುತ್ತಿರುವ ಬೆನ್ನಲ್ಲೇ ಮಠದಲ್ಲಿರುವ ಎಲ್ಲಾ ವಿದ್ಯಾರ್ಥಿನಿಯರನ್ನು ಆಪ್ತ ಸಮಾಲೋಚನೆಗೆ ಒಳಪಡಿಸಲು ಮಕ್ಕಳ ರಕ್ಷಣಾ ಸಚಿವಾಲಯ ನಿರ್ಧರಿಸಿದೆ. ಶಿವಮೂರ್ತಿ ಮುರುಘಾ ಶರಣರು ಜೈಲುಪಾಲಾಗುತ್ತಿದ್ದಂತೆ ಅವರ ವಿರುದ್ಧ ದಾಖಲಾಗುತ್ತಿರುವ ದೂರುಗಳ ಸಂಖ್ಯೆ ಕೂಡಾ ಹೆಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಮಕ್ಕಳ ರಕ್ಷಣಾ ಸಚಿವಾಲಯ ಮತ್ತಷ್ಟು ಸತ್ಯಾಂಶಗಳನ್ನು ಬಯಲಿಗೆಳೆಯಲು ಈ ಕ್ರಮಕ್ಕೆ ಮುಂದಾಗಿದೆ.
ಹಾಗಾಗಿ ಹಾಸ್ಟೆಲ್‌ನಲ್ಲಿದ್ದ ಎಲ್ಲಾ ವಿದ್ಯಾರ್ಥಿನಿಯರೊಂದಿಗೆ ಆಪ್ತ ಸಮಾಲೋಚನೆ ನಡೆಸಲು ಈಗಾಗಲೇ ಕ್ರಮ ಕೈಗೊಂಡಿದ್ದು, 49 ಜನ ವಿದ್ಯಾರ್ಥಿನಿಯರನ್ನು ಆಯಾ ಜಿಲ್ಲೆಗಳಿಗೆ ಕಳುಹಿಸಿಕೊಡಲಾಗಿದೆ. ಉಳಿದ 54 ಜನ ವಿದ್ಯಾರ್ಥಿನಿಯರನ್ನು ತಮ್ಮ ಪೋಷಕರೊಂದಿಗೆ ಕಳಿಸಲಾಗಿದೆ.
ಈ ಸಮಾಲೋಚನೆ ಮೂರು ಹಂತದಲ್ಲಿ ನಡೆಯಲಿದ್ದು, ನವೆಂಬರ್ 30ರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಆಪ್ತ ಸಮಾಲೋಚನಾ ಸಮಯದಲ್ಲಿ ಮತ್ತೆ ಯಾವುದಾದರೂ ಲೈಂಗಿಕ ಕಿರುಕುಳ ನಡೆದಿರುವ ಸಂಗತಿ ಬೆಳಕಿಗೆ ಬಂದರೆ ಕೂಡಲೇ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯದ 11 ಜಿಲ್ಲೆಗಳ ಮಕ್ಕಳ ರಕ್ಷಣಾ ಘಟಕಗಳಿಗೆ ಆದೇಶಿಸಲಾಗಿದೆ.