ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪೂರ್ವ ಲಡಾಖ್ನಲ್ಲಿನ ಬಿಕ್ಕಟ್ಟನ್ನು ಕೊನೆಗೊಳಿಸಲು ಭಾರತದೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಚೀನಾ-ಭಾರತ ಗಡಿಗೆ ಸಂಬಂಧಿಸಿದ ವಿಷಯಗಳ ಕುರಿತು ರಾಜತಾಂತ್ರಿಕ ಮತ್ತು ಮಿಲಿಟರಿ ಸಂಬಂಧಗಳ ಮೂಲಕ ಹಲವಾರು ಸುತ್ತಿನ ಮಾತುಕತೆಗಳನ್ನು ನಡೆಸಿದೆ. ಮುಂದಿನ ಹಂತದಲ್ಲಿ ಮೇಲಿನ ಪರಿಹಾರವನ್ನು ಕಾರ್ಯಗತಗೊಳಿಸಲು ಚೀನಾ ಭಾರತದೊಂದಿಗೆ ಕೆಲಸ ಮಾಡುತ್ತದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ತಿಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ಗಸ್ತು ವ್ಯವಸ್ಥೆ ಕುರಿತು ಒಪ್ಪಂದಕ್ಕೆ ಬಂದಿವೆ. ಗಡಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ವಿವಾದಿತ ಪ್ರದೇಶಗಳಿಂದ ಸೇನೆಯನ್ನು ಹಿಂಪಡೆಯಲು ಭಾರತ ಮತ್ತು ಚೀನಾ ಒಪ್ಪಂದಕ್ಕೆ ಬಂದಿವೆ ಎಂದು ಭಾರತೀಯ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸೋಮವಾರ(ಅಕ್ಟೋಬರ್ 21) ತಿಳಿಸಿದ್ದರು.
ಕಳೆದ ಕೆಲವು ವಾರಗಳಲ್ಲಿ ರಾಜತಾಂತ್ರಿಕ ಮತ್ತು ಮಿಲಿಟರಿ ಸಮಾಲೋಚಕರು ನಡೆಸಿದ ಚರ್ಚೆಯ ಫಲಿತಾಂಶ ಈ ಪ್ರಗತಿಯಾಗಿದೆ. ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ ವಿವಾದಿತ ಪ್ರದೇಶಗಳಿಂದ ಸೈನ್ಯವನ್ನು ಹಿಂತೆಗೆದುಕೊಳ್ಳುವ ಕುರಿತು ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಬರಲಾಗಿದೆ. ಎರಡೂ ದೇಶಗಳು ಸಮಸ್ಯೆಗಳನ್ನು ಪರಿಹರಿಸಲು ಮತ್ತು 2020ರಲ್ಲಿ ಸೈನ್ಯವನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿವೆ ವಿಕ್ರಮ್ ಮಿಶ್ರಿ ಹೇಳಿದರು.
2020 ಜೂನ್ 15ರಂದು ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಭೀಕರ ಘರ್ಷಣೆಯು ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಯಿತು. ಘರ್ಷಣೆಯ ಹಿನ್ನೆಲೆಯಲ್ಲಿ ಎರಡೂ ದೇಶಗಳು LAC ಉದ್ದಕ್ಕೂ ದೊಡ್ಡ ಪ್ರಮಾಣದ ಪಡೆಗಳನ್ನು ನಿಯೋಜಿಸಿವೆ. ಅಂದಿನಿಂದ ಉಭಯ ದೇಶಗಳ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಇದೀಗ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ಗಸ್ತು ವ್ಯವಸ್ಥೆ ಕುರಿತು ಒಪ್ಪಂದಕ್ಕೆ ಬಂದಿವೆ ಎಂದು ಚೀನಾ ಕೂಡ ತಿಳಿಸಿದೆ.
ಈ ಕುರಿತು ಮಾತನಾಡಿದ ಭಾರತೀಯ ಸೇನೆಯ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು, ಚೀನಾದೊಂದಿಗೆ ನೈಜ ನಿಯಂತ್ರಣ ರೇಖೆಯ ಪರಿಸ್ಥಿತಿಯು ಏಪ್ರಿಲ್ 2020ರ ಯಥಾಸ್ಥಿತಿಗೆ ಮರಳಿದ ನಂತರವೇ ಲಡಾಖ್ನಲ್ಲಿರುವ ಭಾರತೀಯ ಪಡೆಗಳು ಹಿಂದಿರುಗಲಿವೆ ಎಂದು ಹೇಳಿದ್ದಾರೆ.