ಹೊಸದಿಗಂತ ಡಿಜಿಟಲ್ ಡೆಸ್ಕ್
ಡ್ರಾಗನ್ ರಾಷ್ಟ್ರ ಚೀನಾ ಹಿಂಬಾಗಿಲಿನಿಂದ ನಡೆಸುವ ಕುತಂತ್ರಿ ಬುದ್ದಿಗಳಿಗೆ ಫೇಮಸ್. ಪಾಕ್ ಉಗ್ರರನ್ನು ಪೋಷಿಸಿದರೆ, ಅದರ ಮಿತ್ರ ಚೀನಾ ಉಗ್ರರಿಗೆ ಯಾವುದೇ ತೊಂದರೆಯಾಗದಂತೆ ರಕ್ಷಾಕವಚವಾಗಿ ನೆರವಿಗೆ ನಿಲ್ಲುತ್ತದೆ. ಅದಕ್ಕೆ ತಕ್ಕನಾಗಿ ಅದಕ್ಕೆ ವಿಟೋ ದಂತಹ ಪರಮಾಧಿಕಾರವೂ ಇದೆ. ತನ್ನ ಸ್ವಾರ್ಥವನ್ನಷ್ಟೇ ಪರಿಗಣಿಸುತ್ತಿರುವ ಚೀನಾ ಇಡೀ ಪ್ರಪಂಚಕ್ಕೆ ಕಂಠಕವಾಗಿ ಮಾರ್ಪಡುತ್ತಿದೆ. ವಿಶ್ವಸಂಸ್ಥೆಯಲ್ಲಿ ಚೀನಾ ಕಳೆದ 48 ಗಂಟೆಗಳಲ್ಲಿ ಇಬ್ಬರು ಪಾಕಿಸ್ತಾನ ಮೂಲದ ಭಯೋತ್ಪಾದಕರನ್ನು ರಕ್ಷಿಸಿದೆ.
ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಅವರ ಪುತ್ರ ಪಾಕಿಸ್ತಾನ ಮೂಲದ ಭಯೋತ್ಪಾದಕ ಹಫೀಜ್ ತಲಾಹ್ ಸಯೀದ್ ಅವರನ್ನು ಕಪ್ಪುಪಟ್ಟಿಗೆ ಸೇರಿಸಲು ವಿಶ್ವಸಂಸ್ಥೆಯಲ್ಲಿ ಭಾರತ ಮತ್ತು ಅಮೆರಿಕಾ ಮಾಡಿದ ಪ್ರಸ್ತಾಪಕ್ಕೆ ಚೀನಾ ಮತ್ತೊಮ್ಮೆ ಅಡ್ಡಗಾಲು ಹಾಕಿದೆ. ಎರಡು ದಿನಗಳ ಅಂತರದಲ್ಲಿ ಚೀನಾ ಕೈಗೊಂಡ ಎರಡನೇ ಕ್ರಮ ಇದಾಗಿದೆ.
ಕೇವಲ ಒಂದು ದಿನದ ಹಿಂದೆ, ಅಲ್-ಖೈದಾ ಮತ್ತು ಎಲ್‌ಇಟಿ ನಿಧಿಸಂಗ್ರಹಣೆ ಮತ್ತು ಇತರ ಬೆಂಬಲ ನೀಡುತ್ತಿದ್ದ ಶಾಹಿದ್ ಮಹಮೂದ್ ನನ್ನು ನಿಷೇಧಿಸುವ ಪ್ರಸ್ತಾಪಕ್ಕೆ ಚೀನಾ ವಿರೋಧಿಸಿತ್ತು.
ಈ ಮೂಲಕ ಈ ವರ್ಷದ ವರ್ಷದ ಜೂನ್‌ನಿಂದ ಐದನೇ ಬಾರಿಗೆ ಚೀನಾ ಉಗ್ರರನ್ನು ಕಾಫಾಡಿದೆ. ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಲಷ್ಕರ್-ಎ-ತೈಬಾದ ಮೇಲೆ ವಿಶ್ವಸಂಸ್ಥೆಯ ನಿಷೇಧದ ಪ್ರಸ್ತಾಪವನ್ನು ಚೀನಾ ತಡೆಹಿಡಿದಿದೆ.
ಹಫೀಜ್ ತಲ್ಹಾ ಸಯೀದ್ ಯಾರು?
ಹಫೀಜ್ ತಲ್ಹಾ ಸಯೀದ್ (46) ಭಯಾನಕ ಭಯೋತ್ಪಾದಕ ಗುಂಪು ಎಲ್ಇಟಿಯ ಪ್ರಮುಖ ನಾಯಕ ಮತ್ತು 26/11 ಮುಂಬೈ ಭಯೋತ್ಪಾದನಾ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನ ಮಗ.
ಈ ವರ್ಷದ ಏಪ್ರಿಲ್‌ನಲ್ಲಿ ಭಾರತ ಸರ್ಕಾರ ಆತನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ಭಾರತದ ಗೃಹ ಸಚಿವಾಲಯವು ತನ್ನ ಅಧಿಸೂಚನೆಯಲ್ಲಿ, ಹಫೀಜ್ ತಲ್ಹಾ ಸಯೀದ್ ಭಾರತದಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ದಾಳಿಗಳಿಗೆ ನೆರವಾಗುವ ಮತ್ತು, ಅಫ್ಘಾನಿಸ್ತಾನದಲ್ಲಿ ನಿಧಿ ಸಂಗ್ರಹ ಮತ್ತು ಯೋಜನೆ ಮತ್ತು ದಾಳಿಗಳನ್ನು ಕಾರ್ಯಗತಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾನೆ ಎಂದು ಹೇಳಿದೆ.
ಆತ ಪಾಕಿಸ್ತಾನದಾದ್ಯಂತ ವಿವಿಧ ಎಲ್‌ಇಟಿ ಕೇಂದ್ರಗಳಿಗೆ ಸಕ್ರಿಯವಾಗಿ ಭೇಟಿ ನೀಡುತ್ತಿದ್ದಾನೆ. ಮತ್ತು ಭಾರತ, ಇಸ್ರೇಲ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ಇತರ ಪಾಶ್ಚಿಮಾತ್ಯ ದೇಶಗಳಲ್ಲಿ ಭಾರತೀಯ ಹಿತಾಸಕ್ತಿಗಳ ವಿರುದ್ಧ ಜಿಹಾದ್ ಪ್ರಚಾರ ಮಾಡುತ್ತ ಮುಸ್ಲಿಂ ಯುವಜನರನ್ನು ತಪ್ಪುದಾರಿಗೆ ಎಳೆಯುತ್ತಿರುವ ಆರೋಪವಿದೆ.
ಹಫೀಜ್ ತಲ್ಹಾ ಸಯೀದ್ ಎಲ್‌ಇಟಿಯ ಹಿರಿಯ ನಾಯಕನಾಗಿದ್ದು, ಭಯೋತ್ಪಾದಕ ಸಂಘಟನೆಯ ಮಹತ್ವದ ವಿಭಾಗವೊಂದರ ಮುಖ್ಯಸ್ಥನಾಗಿದ್ದಾನೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ