ಹೊಸದಿಗಂತ ಡಿಜಿಟಲ್ ಡೆಸ್ಕ್:
ಇದುವರೆಗೂ ಭಾರತವನ್ನು ನಡುಗಿಸಿದ್ದ ಮಹಾಮಳೆ, ಚೀನಾವನ್ನೂ ತತ್ತರಿಸುವಂತೆ ಮಾಡಿದೆ. ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮುಸಲಧಾರೆಗೆ ಜನತೆ ಹೈರಾಣಾಗಿದ್ದಾರೆ.
ಭಾರೀ ಮಳೆ, ಪ್ರವಾಹ ಮುಂತಾದ ಅವಘಡಗಳಲ್ಲಿ ಇದುವರೆಗೂ 20 ಜನರು ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಭಾರೀ ಮಳೆಯಿಂದಾಗಿ ರೈಲು ನಿಲ್ದಾಣಗಳನ್ನು ಮುಚ್ಚಲಾಗಿದೆ. ಸಿಕ್ಕಿಬಿದ್ದ ರೈಲ್ವೆ ಪ್ರಯಾಣಿಕರನ್ನು ಸದ್ಯಕ್ಕೆ ಶಾಲೆಗಳಲ್ಲಿ ಇರಿಸಲಾಗಿದೆ. ಸಂತ್ರಸ್ತರಿಗೆ ಆಹಾರ ಸಾಮಗ್ರಿ ವಿತರಿಸಲು ಮಿಲಿಟರಿ ಹೆಲಿಕಾಪ್ಟರ್‌ಗಳ ನೆರವು ಪಡೆಯಲಾಗಿದೆ.
ಶನಿವಾರದಿಂದ ಬಿದ್ದ ಭಾರೀ ಮಳೆಯು ಚೀನಾ ರಾಜಧಾನಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ಸಂಪೂರ್ಣ ಜಲಾವೃತಗೊಳಿಸಿದೆ. ಪ್ರವಾಹ ಪರಿಸ್ಥಿತಿಯಿಂದಾಗಿ ಕಾರು, ಬೈಕ್, ವಾಹನಗಳು ನೀರಿನಲ್ಲಿ ಮುಳುಗಿಹೋಗಿವೆ.