ಹೊಸದಿಗಂತ ಡಿಜಿಟಲ್ ಡೆಸ್ಕ್:
ಡ್ರ್ಯಾಗನ್ ಚೀನಾದ ಬೆಲ್ಟ್ ಅಂಡ್ ರೋಡ್ ಉಪಕ್ರಮದ ಭಾಗವಾಗಿ ಈಗ ಹತ್ತುವರ್ಷಗಳ ಕೆಳಗೆ ʼಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್ʼ (CPEC) ಯೋಜನೆ ಭಾರೀ ಸದ್ದು ಮಾಡಿತ್ತು. ಭಾರತದ ಭೂಭಾಗವೇ ಆಗಿರುವ ಪಾಕ್ ಆಕ್ರಮಿತ ಕಾಶ್ಮೀರ (POK) ದ ಮೂಲಕ ಹಾದುಹೋಗುವ, ಚೀನಾದ ವಾಯುವ್ಯ ಕ್ಸಿನ್‌ಜಿಯಾಂಗ್ ಉಯ್ಗುರ್ ನಿಂದ ಪಾಕಿಸ್ತಾನದ ಗ್ವಾದರ್ ಬಂದರನ್ನು ಸಂಪರ್ಕಿಸುವ ಈ ಕಾರಿಡಾರ್ ನಲ್ಲಿ ವ್ಯಾಪಕವಾಗಿ ಮೂಲ ಸೌಕರ್ಯಾಭಿವೃದ್ಧಿ, ವಿಶೇಷ ಆರ್ಥಿಕ ವಲಯಗಳ ಸ್ಥಾಪನೆ, ವಿದ್ಯುತ್, ಕೈಗಾರಿಕೆ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪಾಕಿಸ್ತಾನ ಹಾಗು ಚೀನಾ ದೇಶಗಳು ಈ ಯೋಜನೆಯನ್ನು ಘೋಷಿಸಿದ್ದವು.
ಆದರೆ ಇತ್ತೀಚಿನ ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸಲು ಸಹಾಯ ಮಾಡಬೇಕಿದ್ದ ಚೀನಾದ ಕಂಪನಿಗಳೀಗ ನಿಧಾನಗತಿಗೆ ಜಾರಿವೆ. ಪಾಕಿಸ್ತಾನಿ ಸ್ವತಂತ್ರ ಶಕ್ತಿಯುತ್ಪಾದಕರಿಂದ ಪಾವತಿ ವಿಳಂಬ, ಏರುತ್ತಿರುವ ವಿನಿಮಯ ದರ, ಹಾಗು ಪಾಕಿಸ್ತಾನದ ರಾಷ್ಟ್ರೀಯ ವಿದ್ಯುತ್ ಶಕ್ತಿ ನಿಯಂತ್ರಣ ಪ್ರಾಧಿಕಾರದಿಂದ ಸರಿಯಾದ ಸಹಾಯ ಸಿಗುತ್ತಿಲ್ಲದ ಕಾರಣ ಚೀನಾವು ಅಭಿವೃದ್ಧಿ ಕಾರ್ಯಗಳಿಂದ ಹಿಂದೇಟು ಹಾಕುತ್ತಿದ್ದು ತಮ್ಮ ಕಾರ್ಯಗಳಲ್ಲಿ ನಿಧಾನಗತಿ ತೋರುತ್ತಿವೆ ಎನ್ನಲಾಗಿದೆ. ಪಾಕಿಸ್ತಾನವು ಚೀನಾದ ಕಂಪನಿಗಳು ವೇಗವನ್ನು ಹೆಚ್ಚಿಸಬೇಕೆಂದು ಒತ್ತಾಯಿಸುತ್ತಿದ್ದರೆ ಸಮರ್ಪಕ ವ್ಯವಸ್ಥೆಗಳನ್ನು ಸರಿಯಾಗಿ ಪೂರೈಸುವ ಕುರಿತು ಚೀನಾವು ಒತ್ತಾಯಿಸುತ್ತಿದೆ. ಚೀನಾದ ಕಂಪನಿಗಳು ಹಾಗೂ ಪಾಕಿಸ್ತಾನ ಸರ್ಕಾರದ ನಡುವೆ ಸಮನ್ವಯತೆ ಸರಿಯಾಗಿಲ್ಲ. ಹಾಗಾಗಿ ಈ ವಿಷಯದಲ್ಲಿ ಚೀನಾ ಹಾಗೂ ಪಾಕಿಸ್ತಾನಿ ಅಧಿಕಾರಿಗಳ ನಡುವೆ ತಿಕ್ಕಾಟ ನಡೆಯುತ್ತಿದೆ ಎನ್ನಲಾಗಿದೆ. ಈ ಬೆಳವಣಿಗೆಗಳು CPEC ಯೋಜನೆಯು ಹಳಿತಪ್ಪಿತಾ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.
ಮೂಲಗಳ ವರದಿಯ ಪ್ರಕಾರ ಚೀನಾದ ರಾಯಭಾರಿ ಹಾಗೂ ಪಾಕಿಸ್ತಾನದ ಉನ್ನತ ಅಧಿಕಾರಿಗಳ ನಡುವೆ ಈ ಕುರಿತು ಸಭೆ ನಡೆದಿದ್ದು ಚೀನಾವು ಅಗತ್ಯ ಕ್ರಮಗಳನ್ನು ಸರಿಯಾಗಿ ಕೈಗೊಳ್ಳುತ್ತಿಲ್ಲ. ಪ್ರಗತಿಯ ವಿಷಯದಲ್ಲಿ ವಿಳಂಬವಾಗುತ್ತಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ದೂಷಿಸಿದ್ದಾರೆ. ಆದರೆ ಚೀನಾವು ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಪಾಕಿಸ್ತಾನಿ ಕಂಪನಿಗಳ ಪಾವತಿ ವಿಳಂಬ, ಸರ್ಕಾರಿಕಂಪನಿಗಳಿಂದ ಸರಿಯಾದ ಬೆಂಬಲ ಸಿಗುತ್ತಿಲ್ಲ ಎಂದು ದೂಷಿಸಿದೆ. ಚೀನಾದ ಕಂಪನಿಗೆ ಪಾಕಿಸ್ತಾನದ ಶಕ್ತಿಯುತ್ಪಾದಕರು ಸಮರ್ಪಕ ವಿದ್ಯುತ್ ಪೂರೈಸುತ್ತಿಲ್ಲ. ಹೀಗಾಗಿ ಈ ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಸಮನ್ವಯತೆ ಸಾಧಿಸಲು ಉನ್ನತ ಪ್ರಾಧಿಕಾರವೊಂದನ್ನು ಸ್ಥಾಪಿಸುವ ಕುರಿತು ಚೀನಾ ಸಲಹೆ ನೀಡಿದೆ. ಪಾಕಿಸ್ತಾನಿ ಪ್ರಧಾನಿ ಹಾಗೂ ಚೀನಾದ ಅಧ್ಯಕ್ಷರ ಭೇಟಿಯ ಸಮಯದಲ್ಲಿ ಚರ್ಚೆಯಾದ ವಿಷಯಗಳನ್ನು ಸರಿಯಾಗಿ ಅನುಸರಿಸಬೇಕು ಎಂಬರ್ಥದಲ್ಲಿ ಚೀನಾವು ಪಾಕಿಸ್ತಾನವನ್ನು ಒತ್ತಾಯಿಸಿದೆ.
ಈ ಬೆಳವಣಿಗೆಗಳನ್ನು ಗಮನಿಸಿದರೆ ಆರ್ಥಿಕ ಕಾರಿಡಾರ್ ನಿರ್ಮಿಸಿ ಭಾರತವನ್ನು ಹಣಿಯ ಹೊರಟಿದ್ದ ಪಾಕಿಸ್ತಾನ ಹಾಗು ಚೀನಾ ದೇಶಗಳ ಬೃಹತ್ ಯೋಜನೆ ಹಳಿತಪ್ಪೀತಾ ಎಂಬೆಲ್ಲ ಅನುಮಾನಗಳನ್ನು ಹುಟ್ಟುಹಾಕಿದೆ.